ಹನೂರು: ಶಿಥಿಲಾವಸ್ಥೆಯಲ್ಲಿ ಓವರ್ ಹೆಡ್ ಟ್ಯಾಂಕ್; ಆತಂಕದಲ್ಲಿ ಶಾಲಾ ಮಕ್ಕಳು, ಆಡಳಿತ ಮಂಡಳಿ

Update: 2018-09-07 16:44 GMT

ಹನೂರು,ಸೆ.7: ಶಿಥಿಲಾವಸ್ಥೆಯಲ್ಲಿರುವ ಓವರ್ ಹೆಡ್ ಟ್ಯಾಂಕ್ ನಿಂದಾಗಿ ಶಾಲಾ ಮಕ್ಕಳು, ಪೋಷಕರು ಮತ್ತು ಶಾಲಾ ಮಂಡಳಿ ಆತಂಕದಲ್ಲಿದ್ದು, ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕ್ಷೇತ್ರ ವ್ಯಾಪ್ತಿಯ ಮಾರ್ಟಳ್ಳಿ ಗ್ರಾಮ ಪಂಚಾಯತ್ ನ ಗಡಿಯಂಚಿನ ಗ್ರಾಮ ಸಂದನಪಾಳ್ಯ ಸೇಂಟ್ ಆನ್ಸ್ ಚರ್ಚ್ ಗೆ ಸೇರಿದ ಸೆಂಟ್ ಆಂಟೋನಿ ಶಾಲೆಯಲ್ಲಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಶಾಲಾ ಆವರಣದಲ್ಲೇ ಓವರ್ ಹೆಡ್ ಟ್ಯಾಂಕ್ ಇದ್ದು, ಆತಂಕದಲ್ಲಿಯೇ ಶಾಲಾ ಮಂಡಳಿ, ಪೋಷಕರು ಮತ್ತು ವಿದ್ಯಾರ್ಥಿಗಳು ದಿನ ದೂಡುವಂತಾಗಿದೆ. ಹಲವಾರು ಬಾರಿ ಈ ವಿಷಯಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಳಲು ತೋಡಿಕೂಂಡಿದ್ದಾರೆ.

1985 ರಲ್ಲಿ ನಿರ್ಮಿಸಿದ ಹಳೆಯ ಟ್ಯಾಂಕ್: ದಿವಂಗತ ರಾಜೂಗೌಡರು ಈ ಗ್ರಾಮದ ಜನರ ನೀರಿನ ಬವಣೆ ನೀಗಿಸಲು 1985 ರಲ್ಲಿ 50 ಸಾವಿರ ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿದ್ದು, ಗ್ರಾಮದಲ್ಲಿ ತಮಿಳು ಭಾಷೆ ಮಾತನ್ನಾಡುವ ಕ್ರಿಶ್ಚಿಯನ್ ಮತ್ತು ದಲಿತ 450 ಕುಟುಂಬಗಳಿದ್ದು ನೀರಿನ ಅವಶ್ಯಕತೆಗಾಗಿ ಈ ಓವರ್ ಹೆಡ್ ಟ್ಯಾಂಕ್ ಅನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಆದರೆ ಟ್ಯಾಂಕ್ ತುಂಬಾ ಹಳೆಯದಾಗಿದ್ದು, ಬೀಳುವ ಸ್ಥಿತಿಯಲ್ಲಿದೆ. ಈ ಸಂಬಂಧ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ತಿಳಿಸಿದರೂ ಸಹ ಕೆಲಸ ಆಗಿಲ್ಲ ಎಂಬುದು ಗ್ರಾಮಸ್ಥರ ಆಕ್ರೋಶದ ನುಡಿಗಳಾಗಿವೆ .

ಈ ವಿಚಾರವಾಗಿ ಹಲವಾರು ಭಾರಿ ಚರ್ಚಿಸಲಾಗಿದೆ. ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಯಮಿತದಡಿ ಅನುದಾನ ಪಡೆದು ಹಳೆಯ ಓವರ್ ಹೆಡ್ ಟ್ಯಾಂಕ್ ಕೆಡವಿ ಹೊಸ ಟ್ಯಾಂಕ್ ನಿರ್ಮಿಸಲಾಗುವುದು. ಕಳೆದ 5 ವರ್ಷಗಳ ಹಿಂದೆ ಪ್ರತ್ಯೇಕ ಸ್ಥಳದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಲು ತಳಪಾಯ ಹಾಕಿದ್ದು, ಅನುದಾನದ ಕೊರತೆಯಿಂದಾಗಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಈ ತಿಂಗಳಿನಲ್ಲಿ ನಡೆಯುವ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮತ್ತೊಮ್ಮೆ ಈ ವಿಷಯ ಪ್ರಸ್ತಾಪ ಮಾಡುತ್ತೇನೆ. ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.

-ಇರ್ಷಾದ್ ಭಾನು, ಜಿಲ್ಲಾ ಪಂಚಾಯತ್ ಸದಸ್ಯೆ 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News