ಸೋಮವಾರಪೇಟೆ: ಕೊತ್ತನಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದ ರೋಟರಿ ಹಿಲ್ಸ್

Update: 2018-09-07 17:48 GMT

ಸೋಮವಾರಪೇಟೆ,ಸೆ.7: ತಾಲೂಕಿನ ಕೊತ್ತನಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಸೋಮವಾರಪೇಟೆ ರೋಟರಿ ಹಿಲ್ಸ್ ಸಂಸ್ಥೆಯವರು ದತ್ತು ಪಡೆದಿದ್ದಾರೆ.

ಗ್ರಾಮೀಣ ಪ್ರದೇಶದ ಕುಗ್ರಾಮಗಳಲ್ಲಿ ಒಂದಾದ ಕೊತ್ತನಳ್ಳಿ ಪ್ರಾಥಮಿಕ ಶಾಲೆಯನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ರೋಟರಿ ಸಂಸ್ಥೆಯ ವತಿಯಿಂದ ದತ್ತುಪಡೆಯಲಾಗಿದೆ ಎಂದು ಅಧ್ಯಕ್ಷ ಪಿ.ಕೆ.ರವಿ ತಿಳಿಸಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಈಗಾಗಲೇ ಗ್ರಾಮೀಣ ಪ್ರದೇಶಗಳ ಹಲವು ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿರುವುದು ಬೇಸರದ ವಿಚಾರ. ಅಲ್ಲದೆ ಕುಮಾರಳ್ಳಿ ಗ್ರಾಮದಲ್ಲಿ ಶಾಲೆಯನ್ನು ಮುಚ್ಚಲಾಗಿದೆ. ಶಾಂತಳ್ಳಿ ಹಾಗೂ ಬೆಟ್ಟದಳ್ಳಿ ಗ್ರಾಮದಲ್ಲಿರುವ ಶಾಲೆಗಳನ್ನು ಹೊರತು ಪಡಿಸಿದರೆ ಇಡೀ ಎರಡೂ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿಲ್ಲ. ಕಟ್ಟಡ, ಮೈದಾನ ಸೇರಿದಂತೆ ಎಲ್ಲಾ ಅನುಕೂಲತೆಗಳನ್ನು ಹೊಂದಿರುವ ಕೊತ್ತನಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನವನ್ನು ಸಂಸ್ಥೆಯ ವತಿಯಿಂದ ಮಾಡಲಾಗುವುದು ಎಂದರು. 

ಪ್ರಾಥಮಿಕ ಹಂತವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕಗಳು, ಲೇಖನ ಸಾಮಾಗ್ರಿಗಳು, ಶೂ, ಕೊಡೆ ಸೇರಿದಂತೆ ಇನ್ನಿತರ ಅಗತ್ಯ ಪರಿಕರಗಳನ್ನು ವಿತರಿಸಲಾಯಿತು. ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಮಾತನಾಡಿ, ಸೇವಾಪರ ಸಂಘ ಸಂಸ್ಥೆಗಳು ಕುಗ್ರಾಮಗಳಲ್ಲಿರುವಂತಹ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೇ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಕಲಿಕೆಗೆ ಸರ್ಕಾರ ಮುಂದಾದಲ್ಲಿ ಗ್ರಾಮೀಣ ಶಾಲೆಗಳನ್ನು ಉಳಿಸಲು ಸಾಧ್ಯವಾಗಬಹುದು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ರಘುರಾಮ್ ಅವರನ್ನು ಸನ್ಮಾನಿಸಲಾಯಿತು. 

ಈ ಸಂದರ್ಭ ರೋಟರಿ ಕಾರ್ಯದರ್ಶಿ ಪಿ.ನಾಗೇಶ್, ರೋಟರಿ ಸಂಸ್ಥೆ ಯೋಜನಾಧಿಕಾರಿ ಅರುಣ್‍ಕೊತ್ತನಳ್ಳಿ ಮುಖ್ಯಶಿಕ್ಷಕಿ ಸೌಮ್ಯ, ಶಾಲಾ ಶಿಕ್ಷಕ ಪ್ರಭು, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಡಿ.ಪಿ.ತಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News