ವಚನ ಭ್ರಷ್ಟ ಮೋದಿ ಸರಕಾರವನ್ನು ತೊಲಗಿಸಲೇಬೇಕು: ಕೆಪಿಸಿಸಿ ಮುಖಂಡ ಗೋಪಾಲ ಭಂಡಾರಿ

Update: 2018-09-07 18:04 GMT

ಚಿಕ್ಕಮಗಳೂರು, ಸೆ.7: ಭಾರತೀಯ ಜನತಾ ಪಕ್ಷ ಹಾಗೂ ಅದರ ಮುಖಂಡ ಪ್ರಧಾನಿ ನರೇಂದ್ರ ಮೋದಿ ವಚನ ಭ್ರಷ್ಟರಾಗಿದ್ದು, ಅವರನ್ನು ಅಧಿಕಾರದಿಂದ ತೊಲಗಿಸಲೇಬೇಕು ಎಂದು ಮಾಜಿ ಶಾಸಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಗೋಪಾಲ ಭಂಡಾರಿಯವರು ಕೆರೆ ನೀಡಿದರು.

ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಧರಣಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ನಗರದ ಹನುಮಂತಪ್ಪ ವೃತ್ತದಲ್ಲಿ ಮಾತನಾಡಿದ ಅವರು,  2014ರಲ್ಲಿ ಅವರು ಅಧಿಕಾರ ಹಿಡಿಯುವ ಮುನ್ನ ಸ್ವಿಸ್ ಬ್ಯಾಂಕಿನಲ್ಲಿ ಇರುವ ಹಣವನ್ನು ತಂದು ಈ ದೇಶದ ಜನರ ಖಾತೆಗಳಿಗೆ ತುಂಬುವೆ ಎಂದು ಹೇಳಿದ ಮಾತು ಎಲ್ಲಿಗೆ ಹೋಯಿತು. ಸ್ವಿಸ್ ಬ್ಯಾಂಕಿನಿಂದ ಹಣ ತರುವುದಿರಲಿ ಇವರ ಆಡಳಿತದಲ್ಲಿ ಹಿಂದಿಗಿಂತಲೂ ಹೆಚ್ಚು ಹಣ ಸ್ವಿಸ್ ಬ್ಯಾಂಕಿಗೆ ಜಮೆ ಆಗಿದ್ದು ದುರ್ದೈವ ಮತ್ತು ಇವರ ಆಡಳಿತಕ್ಕೆ ಹಿಡಿದ ಕನ್ನಡಿ ಎಂದರು. ರೂ.25 ಕ್ಕೆ ಒಂದು ಲೀಟರ್ ಪೆಟ್ರೋಲ್ ನೀಡುತ್ತೇವೆ ಎಂದಿದ್ದ ಅವರ ಮಾತಿಗೆ ಅವರೇ ಉತ್ತರಿಸಬೇಕು ಎನ್ನುತ್ತಾ ಇಂದು ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಸಿಲಿಂಡರ್ ದರಗಳು ಗಗನಕ್ಕೇರುತ್ತಿರುವುದು ಮತ್ತು ಈ ವಿಚಾರವಾಗಿ ಬಿ.ಜೆ.ಪಿ. ಪಕ್ಷ ಚಕಾರವೆತ್ತದಿರುವುದು ಆ ಪಕ್ಷದವರ ಜನವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ. ಇದನ್ನು ಕಾಂಗ್ರೆಸ್‍ನವರಷ್ಟೆ ಅಲ್ಲ, ಈ ದೇಶದ ಸಾಮಾನ್ಯ ಜನ ಕೂಡ ಪ್ರತಿಭಟಿಸಬೇಕು ಎಂದು ಕೆರೆ ನೀಡಿದರು. 

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮತ್ತೋರ್ವ ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಉಪಾಧ್ಯಕ್ಷ ಮಹಾಬಲ ಭಂಡಾರಿ , ದೇಶದ ರಕ್ಷಣೆಯ ವಿಚಾರದಲ್ಲಿ ಕೂಡ ಬಿಜೆಪಿಯವರು ರಾಜಕಾರಣ ಮಾಡುತ್ತಿರುವುದು ಸಹಿಸುವಂತದಲ್ಲ . ರಾಫೇಲ್ ಯುದ್ದ ವಿಮಾನಗಳನ್ನು ಕೊಳ್ಳಲು ಸರ್ಕಾರದ ಸಂಸ್ಥೆಯಾದ ಹೆಚ್.ಎ.ಎಲ್. ಬಿಟ್ಟು ಅವರ ರಾಜಕಾರಣಕ್ಕೆ ಸಹಾಯವೆಸಗುವ ಅಂಬಾನಿ ಸ್ನೇಹಿತರೋಂದಿಗೆ ವ್ಯವಹಾರ ಕುದುರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್. ವಿಜಯ ಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಈ ದೇಶವನ್ನು ಆಳಿಯೂ ಗೊತ್ತಿದೆ. ಆಳುವವರು ಎಚ್ಚರ ತಪ್ಪಿದಾಗ ಎಚ್ಚರಿಸುವ ಕೆಲಸವನ್ನೂ ಮಾಡುತ್ತದೆ. ಈ ದಿನದ ಪ್ರತಿಭಟನೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಎಚ್ಚರಿಸುವ ಮತ್ತು ಜನರಿಗೆ ಅವರ ತಪ್ಪುಗಳನ್ನು ತಿಳಿಸುವ ಕೆಲಸವಾಗಿರುತ್ತದೆ. ಬೆಲೆ ಏರಿಕೆಗಳು ದಿನೇ-ದಿನೇ ಗಗನಕ್ಕೇರುತ್ತಿದ್ದು ಜನ ಸಾಮಾನ್ಯರ ಬದುಕು ಬರ್ಬರವಾಗುತ್ತಿದೆ. ಇಂತಹ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಿಂದೆಂದಿಗಿಂತಲೂ ಅತ್ಯಂತ ಜಾಗರೂಕರಾಗಿರುವ ಮೂಲಕ ಈ ದೇಶದ ಜನಸಾಮಾನ್ಯರೊಂದಿಗೆ ಇರೋಣ ಎಂದು ಕರೆ ನೀಡಿದರು. 

ಕೆಪಿಸಿಸಿ ಕಾರ್ಯದರ್ಶಿ ಸವಿತಾ ರಮೇಶ್, ರಾಜ್ಯ ಮಹಿಳಾ ಕಾಂಗ್ರೆಸ್‍ನ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಮಾಜಿ ಶಾಸಕ ಎಸ್.ಎಂ. ನಾಗರಾಜು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದ ಸ್ವಾಮಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ ಅವರುಗಳು ಕೂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಗೂ ಮುನ್ನ ತಾಲೂಕು ಕಚೆರಿ ಆವರಣದಿಂದ ಹೊರಟ ಮೆರವಣಿಗೆಯಲ್ಲಿ ಪಕ್ಷದ ಹಲವು ಪದಾಧಿಕಾರಿಗಳು, ನಗರಸಭಾ ಸದಸ್ಯರುಗಳು, ಮುಂಚೂಣಿ ಘಟಕಗಳ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಮತ್ತು ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News