ಚಿಕ್ಕಮಗಳೂರು: ಉಸ್ತುವಾರಿ ಕಾರ್ಯದರ್ಶಿಗಳಿಂದ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ

Update: 2018-09-07 18:16 GMT

ಚಿಕ್ಕಮಗಳೂರು, ಸೆ.7: ಜಿಲ್ಲೆಯಲ್ಲಿ ಕಳೆದ 3 ತಿಂಗಳಿಂದ ಸುರಿದ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಹಾನಿಗೀಡಾದ ಸ್ಥಳಗಳನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲಾ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಧಿಕಾರಿಗಳ ತಂಡದೊಂದಿಗೆ ಆಗಮಿಸಿದ ಅವರು ಜಯಪುರ ಹಾಗೂ ಕೊಗ್ರೆ ಗ್ರಾಮಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ, ರಸ್ತೆ ಹಾನಿ ದುರಸ್ತಿ ಸೇರಿದಂತೆ ತಡೆಗೋಡೆ ನಿರ್ಮಾಣ ಕೈಗೊಳ್ಳಲು ಶೀಘ್ರದಲ್ಲೆ ಕ್ರಮ ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆಯ ಅಭಿಯಂತರರಿಗೆ ಸೂಚನೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಹೆಚ್ಚು ಮಳೆ ಉಂಟಾದಲ್ಲಿ ರಸ್ತೆಯಲ್ಲಿ ಭೂಕುಸಿತ  ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಕೊಗ್ರೆ ಗ್ರಾಮದ ಜನರಲ್ಲಿ ಆತಂಕ ಮೂಡಿಸಿರುವ ಶಬ್ದದ ಬಗ್ಗೆ ಸ್ಥಳೀಯ ಜನರಿಂದ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಜ್ಞರಿಂದ ಮಾಹಿತಿ ಪಡೆದಿದ್ದೇನೆ. ತಜ್ಞರು ಇದರ ಬಗ್ಗೆ ನಿರಂತರ ನಿಗಾ ವಹಿಸಿ ಕಾರಣ ತಿಳಿದುಕೊಳ್ಳಲು ಸೂಚಿಸಿದ ಅವರು, ಮಳೆಯಿಂದ ಜಿಲ್ಲೆಯಲ್ಲಿ ಆಗಿರುವ ಹಾನಿ ಹಾಗೂ ನಷ್ಟದ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮಗಳನ್ನು ವಹಿಸುವುದಾಗಿ ತಿಳಿಸಿದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಟಿ.ರಾಜೇಗೌಡ, ತಾಲೂಕಿನಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಹಾಗೂ ನಷ್ಟದ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ಕಾರ್ಯದರ್ಶಿಗಳ ಗಮನಕ್ಕೆ ತರುವುದರೊಂದಿಗೆ ಶೀಘ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಸಿ.ಸತ್ಯಭಾಮ, ಉಪವಿಭಾಗಾಧಿಕಾರಿ ಅಮರೇಶ್, ಸ್ಥಳೀಯ ಗ್ರಾ.ಪಂ.ಅಧ್ಯಕ್ಷರು ಹಾಗೂ ಸದಸ್ಯರುಗಳು ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News