ಶಿವಮೊಗ್ಗ: ಭಾರತ್ ಬಂದ್‍ಗೆ ಖಾಸಗಿ ಬಸ್ ಮಾಲಕರ ಬೆಂಬಲ

Update: 2018-09-08 13:44 GMT

ಶಿವಮೊಗ್ಗ, ಸೆ. 8: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ದ ಸೆ. 10 ರಂದು ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿರುವ 'ಭಾರತ್ ಬಂದ್'ಗೆ ಶಿವಮೊಗ್ಗ ಖಾಸಗಿ ಬಸ್ ಮಾಲಕರ ಸಂಘ ಬೆಂಬಲ ವ್ಯಕ್ತಪಡಿಸಿದೆ.

'ಅಂದು ಖಾಸಗಿ ಬಸ್ ಓಡಿಸದಿರಲು ನಿರ್ಧರಿಸಲಾಗಿದೆ' ಎಂದು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಆರ್.ರಂಗಪ್ಪ ತಿಳಿಸಿದ್ದಾರೆ. 

ಡೀಸೆಲ್ ಬೆಲೆಯ ನಿರಂತರ ಹೆಚ್ಚಳದಿಂದ, ಖಾಸಗಿ ಬಸ್ ಮಾಲಕರ ಮೇಲೆ ತೀವ್ರತರವಾದ ಆರ್ಥಿಕ ಹೊರೆ ಬಿದ್ದಿದೆ. ದಿನನಿತ್ಯದ ದುಡಿಮೆಯ ಹಣವೆಲ್ಲ ಇಂಧನ ಖರೀದಿಗೆ ವ್ಯಯಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಖಾಸಗಿ ಬಸ್ ಮಾಲಕರು ಬಸ್ ಓಡಿಸುವುದನ್ನೇ ನಿಲ್ಲಿಸುವಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ. 

ತೈಲ ಬೆಲೆ ಹೆಚ್ಚಳದಿಂದ ಬಸ್‍ಗಳಿಗೆ ಸಂಬಂಧಿಸಿದ ಇತರೆ ಬಿಡಿಭಾಗಗಳ ದರದಲ್ಲಿಯೂ ಏರಿಕೆಯಾಗುತ್ತಿದೆ. ತೈಲ ಬೆಲೆ ಮತ್ತೀತರ ಖರ್ಚುವೆಚ್ಚ ಏರಿಕೆಗೆ ಅನುಗುಣವಾಗಿ ಪ್ರಯಾಣ ದರದಲ್ಲಿ ಹೆಚ್ಚಳವಾಗುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಖಾಸಗಿ ಬಸ್ ಮಾಲಕರು ಆರ್ಥಿಕ ಮುಗ್ಗಟ್ಟಿಗೆ ಸಿಲುಕುವಂತಾಗಿದೆ ಎಂದು ತಿಳಿಸಿದ್ದಾರೆ. 

ಕೇಂದ್ರ ಸರ್ಕಾರ ತಕ್ಷಣವೇ ಡೀಸೆಲ್ ಸೇರಿದಂತೆ ತೈಲ ಬೆಲೆಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಈ ಕಾರಣದಿಂದ ಸೆ. 10 ರಂದು ಕರೆ ನೀಡಲಾಗಿರುವ 'ಭಾರತ್ ಬಂದ್'ಗೆ ಜಿಲ್ಲೆಯ ಖಾಸಗಿ ಬಸ್ ಮಾಲಕರು ಬೆಂಬಲ ವ್ಯಕ್ತಪಡಿಸಲಿದ್ದಾರೆ. ಅಂದು ಯಾವುದೇ ಖಾಸಗಿ ಪ್ರಯಾಣಿಕ ಬಸ್‍ಗಳು ರಸ್ತೆಗಿಳಿಯುವುದಿಲ್ಲ. ಪ್ರಯಾಣಿಕರು ಸೂಕ್ತ ಸಹಕಾರ ನೀಡಬೇಕು ಎಂದು ಆರ್.ರಂಗಪ್ಪರವರು ಮನವಿ ಮಾಡಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News