ಪ್ರಕೃತಿ ವಿಕೋಪದಡಿ ಶೃಂಗೇರಿಗೆ 46.68 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವ: ಶಾಸಕ ಟಿ.ಡಿ.ರಾಜೇಗೌಡ

Update: 2018-09-08 13:47 GMT

ಕೊಪ್ಪ, ಸೆ.8: ಈ ವರ್ಷ ಅತಿವೃಷ್ಟಿಯಿಂದ ಶೃಂಗೇರಿ ಕ್ಷೇತ್ರದಲ್ಲಿ ಅತೀ ಹೆಚ್ಚು ಹಾನಿಯಾಗಿದ್ದು, ಪ್ರಕೃತಿ ವಿಕೋಪದಡಿ ಕ್ಷೇತ್ರಕ್ಕೆ 46.68 ಕೋ.ರೂ ಪರಿಹಾರ ನೀಡುವಂತೆ ರಾಜ್ಯ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಕರೆದಿದ್ದ ಟಾಸ್ಕ್ ಪೋರ್ಸ್ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ, ಸೇತುವೆ, ಕುಡಿಯುವ ನೀರು, ಶಾಲಾ ಕಟ್ಟಡ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಕಟ್ಟಡಗಳು, ಸಣ್ಣ ನೀರಾವರಿ, ಚೆಕ್ ಡ್ಯಾಂ, ಬಾವಿಗಳಿಗೆ ಹಾನಿಯಾಗಿದೆ. ಇಂದಿನ ಸಭೆಯಲ್ಲಿ ಹಾನಿಯ ಬಗ್ಗೆ ಮಾಹಿತಿ ಪಡೆದಿದ್ದು, ಶೃಂಗೇರಿಯಲ್ಲಿ ರೂ. 22,51,24,000, ಕೊಪ್ಪದಲ್ಲಿ ರೂ. 23,94,20,000 ಹಾಗೂ ನರಸಿಂಹರಾಜಪುರದಲ್ಲಿ  20 ಲಕ್ಷ ರೂ. ಹಾನಿಯಾದ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದಾರೆ. ಇದನ್ನು ಸಭೆಯಲ್ಲಿ ಅನುಮೋದಿಸಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಗೆ ಸಲ್ಲಿಸಲಾಗುವುದು. ಹೆಚ್ಚುವರಿ ಅನುದಾನಕ್ಕೆ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದರು.

ಅತಿವೃಷ್ಟಿಯಿಂದ ಕ್ಷೇತ್ರದಲ್ಲಿ ಕಾಫಿ, ಅಡಿಕೆ, ಭತ್ತ, ಕಾಳುಮೆಣಸು ಬೆಳೆ ಹಾನಿಯಾಗಿದ್ದು ವಾಸ್ತವದಲ್ಲಿ ನಷ್ಟದ ಪ್ರಮಾಣ ಶೃಂಗೇರಿಯಲ್ಲಿ ರೂ. 40-50 ಕೋಟಿ, ಕೊಪ್ಪದಲ್ಲಿ ರೂ. 50-60 ಕೋಟಿ, ನರಸಿಂಹರಾಜಪುರದಲ್ಲಿ ರೂ. 25-28 ಕೋಟಿ ಬೆಳೆ ನಷ್ಟವಾಗಿದೆ. ಪ್ರಕೃತಿ ವಿಕೋಪದ ಮಾರ್ಗಸೂಚಿಯಂತೆ ನರಸಿಂಹರಾಜಪುರದಲ್ಲಿ ಕೊಪ್ಪದಲ್ಲಿ ರೂ. 5 ಕೋಟಿ, ನರಸಿಂಹರಾಜಪುರದಲ್ಲಿ ರೂ. 2 ಕೋಟಿ ನಷ್ಟವಾಗಿದೆ ಎಂದು ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅವರು ಮಾಹಿತಿ ನೀಡಿದ್ದಾರೆ.

ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು ತಾಲೂಕಿನಾದ್ಯಂತ ಹೋಬಳಿವಾರು ತಂಡ ಮಾಡಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸುತ್ತಿದ್ದಾರೆ. ಸಮೀಕ್ಷೆ ಪೂರ್ಣಗೊಂಡ ನಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. 

ಮಳೆಯಿಂದ ಅತೀ ಹೆಚ್ಚು ಹಾನಿಗೊಳಗಾದ ತಾಲೂಕಿನ ಮೇಗುಂದ ಹೋಬಳಿಯಲ್ಲಿ ಈ ದಿನ ಸರ್ಕಾರದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲಾ ಪ್ರವಾಸ ಕೈಗೊಂಡಿದ್ದಾರೆ ಎಂದರು. 

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಶಾಸಕರಿಗೆ ಮಳೆಹಾನಿಯ ಕುರಿತು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News