ಪ್ರಗತಿ ಕೇವಲ ಪುಸ್ತಕಕ್ಕೆ ಸೀಮಿತವಾಗಬಾರದು: ಡಿಸಿಎಂ ಪರಮೇಶ್ವರ್

Update: 2018-09-08 14:44 GMT

ತುಮಕೂರು,ಸೆ.08: ಎಲ್ಲಾ ಇಲಾಖೆಗಳ ಪ್ರಗತಿ ಕೇವಲ ಪುಸ್ತಕಕ್ಕೆ ಸಿಮೀತವಾಗಬಾರದು. ಅದು ವಾಸ್ತವವಾಗಿ ಕಾರ್ಯಗತವಾಗಬೇಕು ಹಾಗೂ ಫಲಾನುಭವಿಗಳಿಗೆ ಸೌಲಭ್ಯ ತಲುಪಬೇಕು ಎಂದು ಡಿಸಿಎಂ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶರ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಾಗರಿಕರು ಇನ್ನೂ ಜನಪ್ರತಿನಿಧಿಗಳ ಕಚೇರಿ, ಮನೆ ಮುಂದೆ ಬಂದು ಸಾಲುಗಟ್ಟಿ ನಿಲ್ಲುತ್ತಿದ್ದಾರೆ ಎಂದರೆ ಆಡಳಿತ ಮಂಕಾಗಿದೆ ಎಂದೇ ಭಾವಿಸಬೇಕಾಗುತ್ತದೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಸಿಎಂ ಜನತಾ ದರ್ಶನ, ಸಚಿವ ಭೇಟಿ ಸಂದರ್ಭವೂ ಸೇರಿದಂತೆ ನಾಗರಿಕರು ಜನಪ್ರತಿನಿಧಿಗಳ ಮನೆ ಮುಂದೆ ಬರುವುದು ನಿಲ್ಲಬೇಕಾದರೆ ಅಧಿಕಾರಿಗಳು ಮಾನವೀಯ ನೆಲೆಗಟ್ಟಿನಲ್ಲಿ ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಅಧಿಕಾರಿಗಳು ಕಾಲಮಿತಿಯೊಳಗೆ ಕಾರ್ಯನಿರ್ವಹಿಸಬೇಕು. ಸಮರ್ಪಕ ಮಾಹಿತಿ ನೀಡದ ಹಾಗೂ ಕಾರ್ಯನಿರ್ವಹಿಸದ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಜಾಗವಿಲ್ಲ. ಮುಂದಿನ ದಿನಗಳಲ್ಲಿ ಕೆಟ್ಟ ಪರಿಸ್ಥಿತಿ ಎದುರಿಸಬೇಕಾದಿತು ಎಂದು ಎಚ್ಚರಿಕೆ ನೀಡಿದ ಸಚಿವರು, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಇಲಾಖೆಗಳ ಜವಾಬ್ದಾರಿ ಹೆಚ್ಚಿದ್ದು, ಯಾವುದೇ ಇಲಾಖೆ ಪ್ರಗತಿಯಲ್ಲಿ ಕುಂಠಿತವಾದರೆ ಸರಕಾರಕ್ಕೆ ತಪ್ಪು ಮಾಹಿತಿ ನೀಡಿದರೆ ಸಂಬಂಧಪಟ್ಟ ಜಿಲ್ಲಾಮಟ್ಟದ ಅಧಿಕಾರಗಳನ್ನು ನೇರಹೊಣೆಗಾರರನ್ನಾಗಿ ಮಾಡಲಾಗುವುದು ಎಂದುಹೇಳಿದರು.

ಜಿಲ್ಲೆಯಲ್ಲಿ ಒಂದು ಕಡೆ ಅತಿಯಾದ ಮಳೆ, ಮತ್ತೊಂದು ಕಡೆ ಬರ. ಆದರೂ ವಾರ್ಷಿಕ ಸರಾಸರಿ ಮಳೆಯಾಗಿದೆ, ಫಸಲು ಬಂದಿಲ್ಲ. ಕೃಷಿ ಇಲಾಖೆ ಹಾಗೂ ಹವಾಮಾನ ಇಲಾಖೆ ಅಧಿಕಾರಿಗಳು ಇಂದು ನೀಡಿರುವ ಅಂಕಿಅಂಶಗಳನ್ನು ನಾವು ಕೇಂದ್ರ ಸರ್ಕಾರಕ್ಕೆ ನೀಡಿದರೆ ಒಂದು ನಯಾಪೈಸೆ ಅನುದಾನ ನೀಡಲ್ಲ. ವಾರ್ಷಿಕ ಸರಾಸರಿ ಮಾಹಿತಿ ನೀಡುವುದನ್ನು ಬಿಟ್ಟು ಮಾಹೆವಾರು ಬಿತ್ತನೆ, ನಷ್ಟ, ಮಳೆ ಪ್ರಮಾಣದ ಮಾಹಿತಿ ನೀಡಿ, ಜಿಲ್ಲೆಯಲ್ಲಿ 77 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅಂದಾಜು ಪಟ್ಟಿ ಸಲ್ಲಿಸಿದ್ದೀರಿ. ಆದರೆ ರಾಜ್ಯ ಹಾಗೂ ಕೇಂದ್ರ ಸರಕಾರ ಈಗಾಗಲೇ ಅಗ್ರಿ ಆಪ್ ಬಳಸುವಂತೆ ಸೂಚನೆ ನೀಡಿದರೂ ಕಾರ್ಯಗತವಾಗಿಲ್ಲ. ಸ್ಯಾಟಲೈಟ್ ಮೂಲಕ ಕೇಂದ್ರ ಸರಕಾರ ಎಲ್ಲ ಮಾಹಿತಿ ಪಡೆದುಕೊಳ್ಳಲಿದೆ. 1 ವಾರದೊಳಗೆ ಜಿಲ್ಲೆಯ ಬೆಳೆ ನಷ್ಟ ಮಾಹಿತಿಯನ್ನು ಆಪ್‍ಮೂಲಕ ಅಪ್‍ಡೆಟ್ ಮಾಡುವಂತೆ ಕೃಷಿ, ತೋಟಗಾರಿಕಾ, ರೇಷ್ಮೆ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಡಿಯುವ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ವೆಂಕಟರವಣಪ್ಪ ಉಸ್ತುವಾರಿ ಸಚಿವರ ಗಮನ ಸೆಳೆದು, ಅಗತ್ಯವಿರುವ ಕಡೆ ಬೋರ್‍ವೆಲ್ ಕೊರೆದಿದ್ದಾರೆ. ಆದರೆ 6 ತಿಂಗಳು ಕಳೆದರೂ ಪಂಪು, ಮೋಟಾರ್ ಅಳವಡಿಸಿಲ್ಲ. ಪೈಪ್ ಲೈನ್ ಕಾಮಗಾರಿ ಮಾಡಿಲ್ಲ. ಜನರ ಪರವಾಗಿ ಕೆಲಸ ಮಾಡುವುದು ಬಿಟ್ಟು, ತಾಂತ್ರಿಕ ಸಮಸ್ಯೆ, ಅನುದಾನವಿಲ್ಲ ಎಂದು ಹೇಳಿಕೊಂಡು ಜಾರಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು 1ವಾರದೊಳಗೆ ಪಾವಗಡ ತಾಲೂಕಿನಲ್ಲಿ ಬಾಕಿ ಇರುವ 34 ಕೊಳವೆ ಬಾವಿಗಳಿಗೆ ಮೋಟಾರ್ ಪಂಪ್ ಅಳವಡಿಸಬೇಕು. ಪೈಪ್‍ಲೈನ್ ಕಾಮಗಾರಿ ಮಾಡಬೇಕು. ವಿದ್ಯುತ್ ಸಂಪರ್ಕ ಕಲ್ಪಿಸಿ ನಾಗರಿಕರಿಗೆ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದರು.

ಅರಣ್ಯ ಇಲಾಖಾ ಅಧಿಕಾರಿಗಳಿಗೆ ನೋಟಿಸ್: ಗಿಡನೆಡುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಸಮರ್ಪಕವಾಗಿ ಮಾಹಿತಿ ನೀಡಿದ ಅರಣ್ಯ ಇಲಾಖೆ ಸಾಮಾಜಿಕ ವಲಯ ಹಾಗೂ ಕೆಆರ್‍ಡಿಎಲ್ ಅಧಿಕಾರಿಗಳಿಗೆ ಕಾರಣ ನೀಡಿ ಶೋಕಾಸ್ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. 

ಜಾತಿವಾರು ಹಾಸ್ಟೇಲ್‍ಗೆ ಬ್ರೇಕ್: ಸಮುದಾಯ ಆಧಾರಿತವಾಗಿ ವಿದ್ಯಾನಿಲಯಗಳನ್ನು ನಿರ್ಮಿಸುವ ಮೂಲಕ ಚಿಕ್ಕ ಮಕ್ಕಳಲ್ಲಿ ಜಾತಿಯತೆಯನ್ನು ನಾವೇ ಹುಟ್ಟು ಹಾಕಿದಂತೆ ಆಗುತ್ತಿದ್ದು, ಜಾತಿವಾರು ಮೈಂಡ್ ಸೆಟ್ ಮಾಡುತ್ತಿದ್ದೇವಾ ಎಂದು ಪ್ರಶ್ನಿಸಿದ ಸಚಿವ ಪರಮೇಶ್ವರ್, ಸಾಮಾನ್ಯ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಿ ಎಲ್ಲಾ ವರ್ಗಗಳ ವಿದ್ಯಾರ್ಥಿಗಳು ಒಂದೇ ಹಾಸ್ಟೇಲ್‍ನಲ್ಲಿ ಇರುವಂತೆ ಮಾಡಬೇಕಿದೆ. ಆರಂಭದಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು. ನಂತರದ ದಿನಗಳಲ್ಲಿ ಸರಿಯಾಗಲಿದೆ. ಜಿಲ್ಲಾ ಕೇಂದ್ರದಲ್ಲಿ ರಾಜ್ಯ ಸರಕಾರ ಈ ವಿನೂತ ಯೋಜನೆಗೆ ಪೂರಕವಾಗಿ ಹಾಸ್ಟೇಲ್ ನಿರ್ಮಾಣಕ್ಕೆ ಭೂಮಿ ಗುರುತಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್‍ ಕುಮಾರ್, ಜಿಪಂ ಸಿಇಓ ಅನೀಸ್ ಕಣ್ಮಣಿ ಜಾಯ್, ಎಸ್‍ಪಿ ಡಾ.ದಿವ್ಯಾಗೋಪಿನಾಥ್, ಉಸ್ತುವಾರಿ ಸಚಿವರ ಕಾರ್ಯದರ್ಶಿ ಡಾ.ಕೆ.ಪಿ.ಮೋಹನ್‍ರಾಜ್ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News