ಹನೂರು: ಅವೈಜ್ಞಾನಿಕ ಕಾಮಗಾರಿ; ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಗ್ರಾಮಸ್ಥರು

Update: 2018-09-08 17:08 GMT

ಹನೂರು,ಸೆ.8: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ (ಕೆಆರ್‍ಐಡಿಎಲ್) ನಿಯಮಿತದಡಿ ನಿರ್ಮಾಣವಾದ ಸಿಮೆಂಟ್ ರಸ್ತೆ ಹಾಗೂ ಚರಂಡಿ ಕೆಲಸ ಅಪೂರ್ಣ ಮತ್ತು ಅವೈಜ್ಞಾನಿಕವಾಗಿ ಮಾಡಿರುವುದರಿಂದ ಅನೈರ್ಮಲ್ಯತೆ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ಎಂದು ಕೌದಳ್ಳಿ ಸಮೀಪದ ಶೆಟ್ಟಳ್ಳಿ ಗ್ರಾಮ ಪಂಚಾಯತ್ ಗೆ ಸೇರಿದ ಭದ್ರಯ್ಯನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಸುಮಾರು 1 ವರ್ಷಗಳ ಹಿಂದೆ ಭದ್ರಯ್ಯನಹಳ್ಳಿ ಗ್ರಾಮ ಸುವರ್ಣ ಗ್ರಾಮ ಯೋಜನೆಗೆ ಆಯ್ಕೆಯಾಗಿದ್ದು, ಭೂಸೇನಾ ನಿಗಮವು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಯಮಿತದಡಿ ಕಾಮಗಾರಿಗಳನ್ನು ಅನುಷ್ಟಾನ ಮಾಡುವ ಜವಾಬ್ದಾರಿ ತೆಗೆದುಕೊಂಡಿತು. ಸಿಮೆಂಟ್ ರಸ್ತೆ ಹಾಗೂ ಚರಂಡಿ ಕೆಲಸ ಅಪೂರ್ಣ ಮತ್ತು ಅವೈಜ್ಞಾನಿಕವಾಗಿ ಮಾಡಿರುವುದರಿಂದ ಅನೈರ್ಮಲ್ಯತೆ ಹೆಚ್ಚಾಗಿದೆ. ಚರಂಡಿ ನೀರು ಸರಾಗವಾಗಿ ಹರಿದು ಹೋಗದೆ ಅಲ್ಲಲ್ಲಿ ನಿಂತಿರುವುದು ಮತ್ತು ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಸ್ವಚ್ಛತೆ ಮಾಡದಿರುವುದು ಸಾಂಕ್ರಾಮಿಕ ಕಾಯಿಲೆಗಳು ಬರಲು ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ. 

ಗ್ರಾಮ ಪಂಚಾಯತ್ ನ ಜವಾಬ್ದಾರಿ: ಸುವರ್ಣ ಗ್ರಾಮ ಯೋಜನೆಯ ಮುಖ್ಯ ಉದ್ದೇಶ, ಉತ್ತಮ ರಸ್ತೆ, ಚರಂಡಿ, ಬೀದಿ ದೀಪ, ಶುದ್ದ ಕುಡಿಯುವ ನೀರನ್ನು ನೀಡಬೇಕು ಎಂಬುದಾಗಿದೆ. ಆದರೆ ಭದ್ರಯ್ಯನಹಳ್ಳಿ ಸುವರ್ಣ ಗ್ರಾಮ ಯೋಜನೆಗೆ ಆಯ್ಕೆಯಾಗಿ, ಗ್ರಾಮಸ್ಥರು ಅನಾರೋಗ್ಯದಿಂದ ಬಳಲುತ್ತಿರುವುದು ವಿಪರ್ಯಾಸ. ಗ್ರಾಮಸ್ಥರಲ್ಲಿ ಟೈಪಾಯ್ಡ್ ಖಾಯಿಲೆ ಮತ್ತು ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಂಡಿದ್ದು, ಶೀಘ್ರವಾಗಿ ಗ್ರಾಮಪಂಚಾಯತ್ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಚರಂಡಿ ಹೂಳು ತೆಗೆಸುವುದು, ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛತೆ, ಕಸ ವಿಲೇವಾರಿ ಮಾಡಿಸುವ ಕೆಲಸ ಮಾಡಿಸಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶೆಟ್ಟಳ್ಳಿ ಗ್ರಾಮ ಪಂಚಾಯತ್ ಗೆ ವರ್ಗಾವಣೆಯಾಗಿದ್ದು, ಸುವರ್ಣ ಗ್ರಾಮ ಯೋಜನೆ ಕುರಿತು ಮಾಹಿತಿ ತೆಗೆದುಕೊಳ್ಳುತ್ತೇನೆ. ಭದ್ರಯ್ಯನಹಳ್ಳಿ ಗ್ರಾಮದ ಚರಂಡಿ ಹೂಳನ್ನು ತೆಗೆಸಲು ಬೇಗ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಗ್ರಾಮ ನೈರ್ಮಲ್ಯತೆ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗುವುದು
-ಶಂಕರಶೆಟ್ಟಿ, ಪಿ.ಡಿ.ಓ, ಶೆಟ್ಟಳ್ಳಿ ಗ್ರಾಮ ಪಂಚಾಯತ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News