ನಕ್ಸಲ್ ವಾದದ ಮೇಲೆ ನಂಬಿಕೆ ಇಡುವುದು ಅಪರಾಧವಲ್ಲ: ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ

Update: 2018-09-08 17:26 GMT

ಮೈಸೂರು,ಸೆ.8: ಸಾಹಿತಿ ಮಾತ್ರವಲ್ಲದೆ ಚಿಂತಕರೂ ಕೂಡ ನಿರ್ಭೀತಿಯಿಂದ ತಮ್ಮ ಅಭಿಪ್ರಾಯವನ್ನು ಹೇಳದ ವಾತಾವರಣದಲ್ಲಿದ್ದು, ನಕ್ಸಲ್ ವಾದದ ಮೇಲೆ ನಂಬಿಕೆ ಇಡುವುದು ಅಪರಾಧವಲ್ಲ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್ ಹನುಮಂತಯ್ಯ ಬೇಸರ ವ್ಯಕ್ತಪಡಿಸಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ವೈದ್ಯ ವಾರ್ತಾ ಪ್ರಕಾಶನ ಸಹಯೋಗದಲ್ಲಿ ಮೈಸೂರಿನ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಅವರ 'ಚುಟುಕು ಚಿಂತನ ಮಾ ಕಾವ್ಯ ಮಂಥನ' ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಾವು ನೋವು ಉಂಟು ಮಾಡುವುದು ಸಂವಿಧಾನದ ಪ್ರಕಾರ ತಪ್ಪು, ಅದು ಅಪರಾಧ ವಾಗುತ್ತದೆ. ಸಮಾಜದ ಹಸಿವು, ಅಸಮಾನತೆ ಇವುಗಳಿಂದ ನಕ್ಸಲ್‍ಗಳು ಹುಟ್ಟಿಕೊಳುತ್ತಾರೆ. ಇದೇ ವಿಚಾರ ಹೊಂದಿರುವವರು, ನಕ್ಸಲ್‍ವಾದದ ಮೇಲೆ ನಂಬಿಕೆ ಇಡುವುದು ಹೇಗೆ ಅಪರಾಧವಾಗುತ್ತದೆ ಎಂದು ಅವರು ಪ್ರಶ್ನೆ ಮಾಡಿದರು.

ಇತ್ತೀಚಿಗೆ ನಕ್ಸಲರು ಎಂದು ಬಂಧಿಸಿದರಲ್ಲ ಅವರು ಸಹ ನಕ್ಸಲ್ ವಾದದ ಮೇಲೆ ನಂಬಿಕೆ ಇಟ್ಟಿದ್ದರು. ನಕ್ಸಲ್ ವಾದದ ಮೇಲೆ ನಂಬಿಕೆ ಇಟ್ಟ ಮಾತ್ರಕ್ಕೆ ಅವರನ್ನು ಬಂಧಿಸುವುದು ಎಷ್ಟು ಸರಿ? ಇವತ್ತು ನಕ್ಸಲ್ ವಾದದಲ್ಲಿ ನಂಬಿಕೆ ಇರಿಸಿದ್ದೀರಿ ಎಂದು ಬಂಧಿಸುವ ವಾತಾವರಣವಿದೆಯೆಂದರೆ ನಾವು ಯಾವ ಪರಿಸ್ಥಿತಿಯಲ್ಲಿದ್ದೇವೆ. ನಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ, ಧೈರ್ಯವಾಗಿ ಹೇಳಲಾಗದ ಪರಿಸ್ಥಿತಿಯಿದೆ ಎಂದರು.  

ಜಾಹೀರಾತು ಹಣದಲ್ಲಿ ಸಂಬಳ ನೀಡಿ: ಸ್ವಚ್ಛ ಭಾರತ ಎಂದು ಜಾಹೀರಾತು ನೀಡಿತ್ತಿದ್ದೀರಲ್ಲ. ಇದರಲ್ಲಿ ದೇಶವನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರಿಗೆ ಸಂಬಂಳ ನೀಡಬಹುದು. ಸ್ವಚ್ಛ ಭಾರತ ಎಂದು ವ್ಯರ್ಥ ಜಾಹೀರಾತು ನೀಡುತ್ತಿದ್ದಾರೆ. ಭಾರತಕ್ಕೆ ಭೌತಿಕ ಸ್ವಚ್ಛತೆಯ ಜತೆಗೆ ಮಾನಸಿಕ ಸ್ವಚ್ಛತೆ ಆಗಬೇಕಿದೆ. ಇದರೆಡೆಗೆ ಕೇಂದ್ರ ಸರಕಾರ ಚಿಂತಿಸಬೇಕು. ಜಾತಿ ವ್ಯವಸ್ಥೆ ಮತ್ತು ಮಲ ಹೊರುವ ಪದ್ಧತಿ ಇನ್ನೂ ಜೀವಂತವಾಗಿದೆ' ಎಂದು ಅಕ್ರೋಶ ವ್ಯಕ್ತಪಡಿಸಿದರು.

ಕನ್ನಡ ಕಾವ್ಯ ಪರಂಪರೆಯೇ ಹೆಮ್ಮೆ ಪಡುವ ಪರಂಪರೆ. ಮಾಲಗತ್ತಿಯವರ ಈ ಕೃತಿ ಕನ್ನಡದ ಯಾವುದಾದರೂ ವಿದ್ಯಾರ್ಥಿ ಅಧ್ಯಯನಕ್ಕಾಗಿ ಅಳವಡಿಸಿದರೆ, ಮಾಲಗತ್ತಿ ಅವರಿಗೆ ಮತ್ತೊಂದು ಬಾರಿ ಪಿಎಚ್ ಡಿ ನೀಡಬಹುದಾದ ಕೃತಿ ಎಂದರು. ಕನ್ನಡ ಚುಟುಕು ಸಾಹಿತ್ಯದ ಮಹತ್ವವನ್ನು ರಾಮಾಯಣ ಮಹಾಭಾರತದಿಂದ ಆರಂಭಿಸಿ ವೇದ, ಉಪನಿಷತ್ತುಗಳಲ್ಲಿ ಇದು ಯಾವ ರೀತಿ ಕೆಲಸ ಮಾಡಿದೆ. ಕನ್ನಡದ ದೀರ್ಘ ಪರಂಪರೆಯಲ್ಲಿ ಚುಟುಕು ಸಾಹಿತ್ಯದ ಹಸ್ತ ಯಾವ ರೀತಿ ಇದೆ ಎಂಬುದನ್ನು ವಿವರಿಸಿದ್ದಾರೆ ಎಂದು ತಿಳಿಸಿದರು.

ಕೃತಿ ಕತೃ ಪ್ರೊ.ಅರವಿಂದ ಮಾಲಗತ್ತಿ ಕೃತಿ ರಚನೆಯ ತಮ್ಮ ಅನುಭವ ಹೇಳಿಕೊಂಡರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಂ ನೀಲಗಿರಿ ತಳವಾರ ಮಾತನಾಡಿದರು. ಹಿರಿಯ ವಿದ್ವಾಂಸ ಡಾ.ಟಿ.ವಿ ವೆಂಕಟಾಚಲ ಶಾಸ್ತ್ರಿ, ವೈದ್ಯ ವಾರ್ತಾ ಪ್ರಕಾಶನ ಸ್ಥಾಪಕ ನಿರ್ದೇಶಕ ಡಾ ಎಂ.ಜಿ.ಆರ್ ಅರಸ್, ಚುಟುಕು ಸಾಹಿತ್ಯ ಪರಿಷತ್‍ ಸಂಘಟನಾ ಕಾರ್ಯದರ್ಶಿ ಎಂ.ಚಂದ್ರಶೇಖರ್ ಸೇರಿದಂತೆ ಮತ್ತಿತರಿದ್ದರು. 

ದಲಿತ ಬಂಡಾಯದ ಬಿಸಿ ನಂತರ ಚುಟುಕು ಸಾಹಿತ್ಯ ಪ್ರಾರಂಭವಾಯಿತು. ಚುಟುಕು ಸಾಹಿತ್ಯದ ಆಯಾಮದ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದೆ. ಒಂದು ವಿಚಾರದ ಜೊತೆಗೆ ಅದರ ಸಂಪೂರ್ಣ ಕುಟುಂಬವನ್ನು ತೆಗೆದುಕೊಂಡು 'ಮಾ ಕಾವ್ಯ ಮಂಥನ' ರಚಿಸಿದ್ದೇನೆ.
-ಪ್ರೊ.ಅರವಿಂದ ಮಾಲಗತ್ತಿ, ಸಾಹಿತಿ, ಪ್ರಗತಿಪರ ಚಿಂತಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News