ಮಂಡ್ಯ: ಮಾನವ ಹಕ್ಕು ಹೋರಾಟಗಾರರ ಬಂಧನ ಖಂಡಿಸಿ ಧರಣಿ

Update: 2018-09-08 17:34 GMT

ಮಂಡ್ಯ, ಸೆ.8: ಮಾನವ ಹಕ್ಕು ಹೋರಾಟಗಾರರು ಹಾಗೂ ಚಿಂತಕರ ಬಂಧನ ಖಂಡಿಸಿ ಕರ್ನಾಟಕ ಜನಶಕ್ತಿ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ರೈತಸಭಾಂಗಣದ ಕುವೆಂಪು ಪ್ರತಿಮೆ ಮುಂಭಾಗ ಶನಿವಾರ ಸಂಜೆ ಧರಣಿ ನಡೆಯಿತು.

ಪ್ರಧಾನಿ ನರೇಂದ್ರ ಮೋದಿ ಹತ್ಯೆಯ ಸಂಚು ಎಂಬ ಪ್ರಹಸನದ ಮುಂದುವರಿದ ಭಾಗವಾಗಿ ಚಿಂತಕರು, ಪ್ರಗತಿಪರ ಕವಿ, ಲೇಖಕರು ಹಾಗೂ ಹೋರಾಟಗಾರರ ಬಂಧನವಾಗುತ್ತಿದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಮುಂಬೈನ ಮಾನವ ಹಕ್ಕು ಹೋರಾಟಗಾರ ವೆರ್ನಾನ್ ಗೊನ್ಸಾಲ್ವೆಸ್, ಅರುಣ್ ಫೆರೀರಾ, ದೆಹಲಿಯ ಗೌತಮ್ ನವ್ಲಾಖಾ, ಫರಿದಾಬಾದ್ ಸುಧಾ ಭಾರದ್ವಾಜ್ ಹಾಗೂ ತೆಲುಗಿನ ಕ್ರಾಂತಿಕರಿ ಕವಿ ವರವರರಾವ್ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದು, ದಲಿತ ಬರಹಗಾರ ಆನಂದ ತೇಲ್ತುಂಬ್ಡೆ ಮತ್ತು ಕೆ.ಸತ್ಯನಾರಾಯಣ ಅವರನ್ನು ವಿಚಾರಣೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಅವರು ಕಿಡಿಕಾರಿದರು.

ಕೋರೆಂಗಾವ್ ಮೇಳದ ಸಂದರ್ಭದಲ್ಲಿ ದಲಿತ ಸಂಘಟನೆಗಳು ವಿಜಯದ ದ್ವಿಶತಮಾನ ಅಚರಿಸುವ ವೇಳೆ ಸ್ಥಳೀಯ ಆರೆಸ್ಸೆಸ್ ಮತ್ತು ಹಿಂದುತ್ವ ಸಂಘಟನೆಗಳ ಚಿತಾವಣೆಯಿಂದ ತೀವ್ರ ಹಿಂಸೆ ಸೃಷ್ಟಿಯಾಗಿತ್ತು. ಅದರ ಸಂಚುಕೋರರಾದ ಮನೋಹರ ಭಿಡೆ ಮತ್ತು ಏಕ್ಬೂಟೆ ವಿರುದ್ಧ ಮಹಾರಾಷ್ಟ್ರ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅದರ ಬದಲು ರ್ಯಾಲಿ ಸಂಘಟಿಸಿದ್ದ ದಲಿತ ನಾಯಕರ ಮೇಲೆ ನಕ್ಸಲ್ ಸಂಪರ್ಕ ಎಂಬ ಆರೋಪ ಹೊರಿಸಿ ಬಂಧಿಸಿಸಲಾಗಿದೆ ಎಂದು ಅವರು ಹೇಳಿದರು.

ಭಿನ್ನಾಭಿಪ್ರಾಯಗಳಿಗೆ ಮನ್ನಣೆ ನೀಡದ ಕೇಂದ್ರ ಸರಕಾರ ಹಾಗೂ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ತಮ್ಮ ನೀತಿಗಳನ್ನು ಪ್ರಶ್ನಿಸುವವರನ್ನು ಹತ್ತಿಕ್ಕುವ ಹುನ್ನಾರ ಹೆಣೆಯುತ್ತಿವೆ. ಸಾಮಾಜಿಕ ಕಾರ್ಯಕರ್ತರನ್ನು ಇಂತಹ ಪ್ರಕರಣಗಳು ಹಾಗೂ ವಿಚಾರಗಳಲ್ಲಿ ನಿರತರಾಗುವಂತೆ ಮಾಡುವ ಮೂಲಕ ತನ್ನ ಬೇಳೆ ಬೇಯಿಸಿಕೊಳ್ಳುವ ಖಯಾಲಿಯಲ್ಲಿ ತೊಡಗಿವೆ ಎಂದು ಅವರು ದೂರಿದರು.

ವಿಚಾರವಾದಿಗಳ ಬಂಧನಕ್ಕೆ ದೆಹಲಿ ಹೈಕೋರ್ಟ್, ಸುಧಾ ಭಾರಧ್ವಜ್, ವರವರರಾವ್, ಇತರ ಬಂಧಿತರನ್ನು ಗೃಹ ಬಂಧನದಲ್ಲಿಡುವಂತೆ ಆದೇಶ ನೀಡಿ ಸಣ್ಣ ರಿಲೀಫ್ ನೀಡಿದೆ. ವಿಚಾರಣೆ ವೇಳೆ ನ್ಯಾಯಾಧೀಶ ಚಂದ್ರಚೂಡ್ ಅವರು ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಸುರಕ್ಷತೆಯ ಕವಾಟ. ಇಂತಹ ಭಿನ್ನಾಭಿಪ್ರಾಯಗಳಿಗೆ ಮನ್ನಣೆ ಸಿಗದಿದ್ದರೆ ಅಭಿಪ್ರಾಯಗಳ ಒತ್ತಡದಲ್ಲಿರುವ ಕುಕ್ಕರ್ ಸ್ಪೋಟಿಸುತ್ತದೆ ಎಂಬ ಮಹತ್ವದ ಮಾತುಗಳನ್ನು ಹೇಳಿರುವುದು ಗಮನಾರ್ಹ ಎಂದು ಧರಣಿ ನಿರತರು ಸಂತಸ ವ್ಯಕ್ತಪಡಿಸಿದರು.

ಹುರಗಲವಾಡಿ ರಾಮಯ್ಯ ಮತ್ತು ತಂಡದವರು ಕ್ರಾಂತಿಗೀತೆಗಳನ್ನು ಹಾಡಿದರು. ರೈತ ಹೋರಾಟಗಾರ್ತಿ ಸುನಂದ ಜಯರಾಂ, ಸಿದ್ದರಾಜು, ವಕೀಲರಾದ ಶ್ರೀನಿವಾಸ್, ಚೇತನ್, ಪತ್ರಕರ್ತ ನಾಗೇಶ್, ಸಂತೋಷ್, ಪೂರ್ಣಿಮಾ ರೈತಸಂಘದ ಲತಾಶಂಕರ್ ಮೊದಲಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News