ರಾಜಕಾರಣದಲ್ಲಿ ಪ್ರಾಮಾಣಿಕತೆ ಅಸಾಧ್ಯ: ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್

Update: 2018-09-08 17:50 GMT

ದಾವಣಗೆರೆ,ಸೆ.8: ರಾಜಕಾರಣದಲ್ಲಿ ಪ್ರಾಮಾಣಿಕತೆ ಅಸಾಧ್ಯವಾಗಿದ್ದು, ಇಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ಬೇಸರ ವ್ಯಕ್ತಪಡಿಸಿದರು.

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಕಲಾಕುಂಚದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ಕುವರ, ಕನ್ನಡ ಕುವರಿ ಜಿಲ್ಲಾ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ನಡೆಯುವ ಭ್ರಷ್ಟಾಚಾರ, ಮೂಲ ಸೌಲಭ್ಯಗಳ ಕೊರತೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಾನು ಮಂತ್ರಿಯಾಗಿದ್ದ ವೇಳೆ ಕ್ರಮವಹಿಸಿದ್ದೆ. ಆದರೆ, ಕೆಲವರು ಮುಖ್ಯಮಂತ್ರಿ ಬಳಿ ನನ್ನ ಬಗ್ಗೆ ಇಲ್ಲಸಲ್ಲದನ್ನು ಹೇಳಿ ನನ್ನನ್ನು ಮಂತ್ರಿಗಿರಿಯಿಂದ ಕೆಳಗಿಳಿಸಿದರು ಎಂದ ಅವರು, ನಾನು ಅಧಿಕಾರದ ಹಿಂದೆ ಬೀಳಲಿಲ್ಲ. ನನ್ನ ಇತಿಮಿತಿಯೊಳಗೆ ಸಾಮಾಜಿಕ ಕೆಲಸಗಳನ್ನು ಮಾಡಿದೆ. ನಾಲ್ಕು ವರ್ಷ ಎಂಎಲ್‍ಸಿ ಆಗಿ ಕಾರ್ಯ ನಿರ್ವಹಿಸಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಕುಂಚದ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಕೆ.ಹೆಚ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ ಕುರ್ಕಿ, ತಾಲೂಕು ಅಧ್ಯಕ್ಷ ಬಿ.ವಾಮದೇವಪ್ಪ, ಮೋತಿ ಪರಮೇಶ್ವರಪ್ಪ, ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶಣೈ, ಪ್ರಧಾನ ಕಾರ್ಯದರ್ಶಿ ಜಿ.ಬಿ.ಲೋಕೇಶ್, ವಿಜಯಕುಮಾರ್ ಶೆಟ್ಟಿ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News