ಚಿಕಾಗೊ ಹಿಂದೂ ಸಮ್ಮೇಳನದಲ್ಲಿ ಮೋಹನ್ ಭಾಗ್ವತ್ ಹೇಳಿದ್ದೇನು ಗೊತ್ತೇ ?

Update: 2018-09-09 04:29 GMT

ಚಿಕಾಗೊ, ಸೆ. 9: "ಹಿಂದೂಗಳೆಲ್ಲ ಒಗ್ಗೂಡಿ ಸಂಘಟಿತರಾಗಬೇಕು. ಸಿಂಹ ಕೂಡಾ ಒಂಟಿಯಾಗಿದ್ದಲ್ಲಿ ಕಾಡುನಾಯಿಗಳು ದಾಳಿ ಮಾಡಿ ಅದನ್ನು ನಾಶಪಡಿಸಬಹುದು" ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.

ಎರಡನೇ ವಿಶ್ವ ಹಿಂದೂ ಸಮ್ಮೇಳನದಲ್ಲಿ 2500 ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ಹಿಂದೂಗಳಿಗೆ ಪ್ರಾಬಲ್ಯ ಸ್ಥಾಪಿಸುವ ಆಕಾಂಕ್ಷೆ ಇಲ್ಲ. ಹಿಂದೂಗಳು ಸಾವಿರಾರು ವರ್ಷದಿಂದ ಸಂಕಷ್ಟ ಎದುರಿಸುತ್ತಾ ಬಂದಿದ್ದಾರೆ" ಎಂದು ಅಭಿಪ್ರಾಯಪಟ್ಟರು.

"ಹಿಂದೂಗಳು ಸಮುದಾಯವಾಗಿ ಕೆಲಸ ಮಾಡಿದಾಗ ಮಾತ್ರ ಹಿಂದೂ ಸಮಾಜ ಸಮೃದ್ಧವಾಗುತ್ತದೆ. ನಮ್ಮ ಅಹಂ ನಿಯಂತ್ರಿಸಿಕೊಂಡು ಒಮ್ಮತವನ್ನು ಸ್ವೀಕರಿಸುವುದರಿಂದ ಮಾತ್ರ ಇಡೀ ಜಗತ್ತನ್ನು ಒಂದು ತಂಡವಾಗಿ ರೂಪಿಸಲು ಸಾಧ್ಯ. ಉದಾಹರಣೆಗೆ ಕೃಷ್ಣ ಹಾಗೂ ಯುದಿಷ್ಟಿರ ಎಂದೂ ವೈಮನಸ್ಸು ಹೊಂದಿರಲಿಲ್ಲ" ಎಂದು ವಿವರಿಸಿದರು.

"ಆರಂಭಿಕ ದಿನಗಳಲ್ಲಿ ನಾವು ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾಗ ಸಂಘಟಿತರಾಗುವಂತೆ ಹಿಂದೂಗಳಿಗೆ ಕೇಳಿಕೊಳ್ಳುತ್ತಿದ್ದೆವು. ಆಗ ಸಿಂಹಗಳೆಂದೂ ಗುಂಪಾಗಿ ಇರುವುದಿಲ್ಲ ಎಂಬ ಉತ್ತರ ಬರುತ್ತಿತ್ತು. ಆದರೆ ಸಿಂಹವಾಗಲೀ, ಕಾಡಿನ ರಾಜ ಎನಿಸಿದ ರಾಯಲ್ ಬಂಗಾಳ ಹುಲಿಯಾಗಲೀ ಒಂಟಿಯಾಗಿದ್ದರೆ, ಕಾಡುನಾಯಿ ಕೂಡಾ ದಾಳಿ ಮಾಡಿ ನಾಶಪಡಿಸಬಲ್ಲದು" ಎಂದು ಹೇಳಿದರು.

ತತ್ವ ಸಿದ್ಧಾಂತದ ಹಿನ್ನೆಲೆ ಒಳ್ಳೆಯದು ಎಂದ ಅವರು, "ನಾನು ಆಧುನಿಕತೆಯ ವಿರೋಧಿಯಲ್ಲ; ಆದರೆ ಭವಿಷ್ಯದ ಪರ" ಎಂದು ಬಣ್ಣಿಸಿದರು. ಹಿಂದೂ ಧರ್ಮ ಪ್ರಾಚೀನ ಹಾಗೂ ಆಧುನಿಕೋತ್ತರ ಎಂದು ವಿಶ್ಲೇಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News