ಮಹಿಳಾ ಪೊಲೀಸ್ ಅಧಿಕಾರಿಗೆ ಧಮಕಿ ಹಾಕಿದ ಬಿಜೆಪಿ ಶಾಸಕ

Update: 2018-09-09 10:34 GMT

ಹೊಸದಿಲ್ಲಿ, ಸೆ.9: ಉತ್ತರಾಖಂಡದ ರುದ್ರಾಪುರ ಕ್ಷೇತ್ರದ ಶಾಸಕ ರಾಜ್‍ಕುಮಾರ್ ತುಕ್ರಾಲ್ ಪೊಲೀಸ್ ಠಾಣೆಯ ಹೊರಗೆ ಮಹಿಳಾ ಸಬ್ ಇನ್‍ಸ್ಪೆಕ್ಟರ್ ಒಬ್ಬರಿಗೆ ಧಮಕಿ ಹಾಕುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಗರ ಗಸ್ತು ವಿಭಾಗದ ಸಬ್ ಇನ್‍ಸ್ಪೆಕ್ಟರ್ ಅನಿತಾ ಗೈರೋಲಾ ಮತ್ತು ಶಾಸಕ ತುಕ್ರಾಲ್ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ಶಾಸಕ ಬೆದರಿಕೆ ಹಾಕಿ ನಿಮ್ಮ ನಡವಳಿಕೆ ತಿದ್ದಿಕೊಳ್ಳಿ ಎಂದು ಸಿಟ್ಟಿನಿಂದ ಹೇಳಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ ಸಂಬಂಧ ಶಾಸಕ ಮತ್ತು ಪೊಲೀಸ್ ಅಧಿಕಾರಿ ನಡುವೆ ವಾಗ್ವಾದ ನಡೆದಿತ್ತು. ಈ ಘಟನೆ ಶುಕ್ರವಾರ ನಡೆದಿದೆ ಎನ್ನಲಾಗಿದೆ.

ಈ ವರ್ಷ ಆರಂಭದಲ್ಲಿ ರಾಜ್‍ಕುಮಾರ್ ತಮ್ಮ ಮನೆ ಮುಂದೆ ಮೂವರು ದಲಿತ ಮಹಿಳೆಯರಿಗೆ ಹೊಡೆದು ನಿಂದಿಸಿದ್ದು, ವಿವಾದಕ್ಕೆ ಕಾರಣವಾಗಿತ್ತು. ಎರಡು ಕುಟುಂಬಗಳ ನಡುವಿನ ವ್ಯಾಜ್ಯ ಪರಿಹಾರಕ್ಕಾಗಿ ಉತ್ತರಾಖಂಡದ ಉಧಾಂಸಿಂಗ್ ನಗರ ಜಿಲ್ಲೆಯ ರುದ್ರಾಪುರದಲ್ಲಿರುವ ತಮ್ಮ ನಿವಾಸದಲ್ಲಿ ಮಾರ್ಚ್ 9ರಂದು ಪಂಚಾಯ್ತಿ ಕರೆದಿದ್ದ ಶಾಸಕ ಹಲ್ಲೆ ನಡೆಸಿದ್ದರು ಎಂದು ಆಪಾದಿಸಲಾಗಿತ್ತು. ದಲಿತ ಕುಟುಂಬದ ಅಪ್ರಾಪ್ತ ವಯಸ್ಸಿನ ಯುವಕನೊಬ್ಬ ಅಪ್ರಾಪ್ತ ವಯಸ್ಸಿನ ಯುವತಿಯ ಜತೆ ಓಡಿಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪಂಚಾಯ್ತಿ ನಡೆಸಿದ್ದರು.

ತನ್ನ ಮೇಲೆ ಹಾಗೂ ಪತ್ನಿ ಮಾಲಾ ಮೇಲೆ ಶಾಸಕ ಹಲ್ಲೆ ನಡೆಸಿದ್ದಾಗಿ ಮತ್ತು ಇಬ್ಬರು ಹೆಣ್ಣುಮಕ್ಕಳಾದ ಪೂಜಾ ಹಾಗೂ ಸೋನಮ್ ಅವರನ್ನು ನಿಂದಿಸಿದ್ದಾಗಿ ಹುಡುಗನ ತಂದೆ ರಾಮ್ ಕಿಶೋರ್ ದೂರು ನೀಡಿದ್ದರು. ಶಾಸಕರು ಮಹಿಳೆಯರನ್ನು ಹೊಡೆಯುತ್ತಿರುವ ದೃಶ್ಯವನ್ನು ವಿಡಿಯೊದಲ್ಲಿ ಸೆರೆಹಿಡಿಯಲಾಗಿದ್ದು, ಇದು ಕೂಡಾ ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News