ಪ್ರಧಾನಿ ಮೋದಿ ಉತ್ತರಿಸಲೇಬೇಕು

Update: 2018-09-09 18:42 GMT

 2014ರ ಚುನಾವಣೆಯನ್ನು ಎದುರಿಸುವಲ್ಲಿ ಮೋದಿ ನೇತೃತ್ವದ ಬಿಜೆಪಿ ಮೊದಲ ಅಸ್ತ್ರವಾಗಿ ಬಳಸಿಕೊಂಡದ್ದು ಪೆಟ್ರೋಲ್ ದರವನ್ನು. ಪೆಟ್ರೋಲ್‌ಗೆ ಬೆಂಕಿಯನ್ನು ಸುರಿದು ತಮ್ಮ ಭಾಷಣಗಳನ್ನು ಹರಿಯ ಬಿಟ್ಟರು. ಚುನಾವಣಾ ಪೂರ್ವದಲ್ಲಿ ಅವರು ಮಾಡಿದ ಸಾಲು ಸಾಲು ಭಾಷಣಗಳೇ ಇಂದು ಮೋದಿಯನ್ನು ಮರು ಪ್ರಶ್ನಿಸುತ್ತಿವೆೆ. ಮೋದಿಯ ಆಡಳಿತವನ್ನು ವಿಶ್ಲೇಷಿಸಲು, ಟೀಕಿಸಲು ಚುನಾವಣಾ ಪೂರ್ವ ಭಾಷಣಗಳೇ ಧಾರಾಳ ಸಾಕು. ಒಂದು ಕಾಲದ ಮೋದಿಯೇ, ಇಂದಿನ ಮೋದಿಯ ಆಡಳಿತವನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಅಧಿಕಾರಕ್ಕೇರಿದ ಮೊದಲ ಬಾರಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಭಾಷಣ ಮಾಡಿದಾಗ ಆ ಭಾಷಣದಲ್ಲಿ ‘ಪಾಸಿಟಿವ್ ಎನರ್ಜಿ’ ಇದೆ ಎಂದು ಹಲವರು ವಿಶ್ಲೇಷಿಸಿದ್ದರು. ಮೊತ್ತ ಮೊದಲಬಾರಿ ಅವರು ಕೆಂಪು ಕೋಟೆಯ ಮೇಲೆ ನಿಂತು ಭಾಷಣ ಮಾಡಿದಾಗ, ಅದರಲ್ಲೂ ಪಾಸಿಟಿವ್ ಎನರ್ಜಿಯನ್ನು ಚಿಂತಕರು, ಲೇಖಕರು ಗುರುತಿಸಿದರು. ಜನರಂತೂ ಸಂಭ್ರಮದಿಂದ ‘ಅಚ್ಛೇ ದಿನ್’ಗಾಗಿ ಕಾಯ ತೊಡಗಿದರು. ಆದರೆ ಪೆಟ್ರೋಲ್, ಡೀಸೆಲ್ ಬೆಲೆ ಬೆಂಕಿಯಂತೆ ಏರುತ್ತಾ ಹೋಯಿತು. ಮೋದಿಯ ಭಾಷಣಗಳಲ್ಲೇ ಮನರಂಜಿಸಿಕೊಂಡು ತೃಪ್ತಿ ಪಡಬೇಕಾದ ಸನ್ನಿವೇಶ ಎದುರಾಯಿತು. ಮೋದಿಯ ಭಾಷಣದೊಳಗಿರುವ ಪಾಸಿಟಿವ್ ಎನರ್ಜಿಯಿಂದ ವಾಹನಗಳನ್ನು ಓಡಿಸಲು ಸಾಧ್ಯವಿಲ್ಲ, ಅಡುಗೆ ಮನೆಯಲ್ಲಿ ಬೆಂಕಿ ಹೊತ್ತಿಸಲು ಸಾಧ್ಯವಿಲ್ಲ ಎನ್ನುವುದು ಇದೀಗ ಜನರಿಗೆ ಅರಿವಾಗಿದೆ. ಆದರೂ ಕೆಲವು ಮೋದಿ ಭಕ್ತರಲ್ಲಿ ನಿರೀಕ್ಷೆ ಬತ್ತಿಲ್ಲ.

‘ಇಷ್ಟೆಲ್ಲ ಅನಾಹುತಗಳನ್ನು ಮಾಡಿರುವ ಮೋದಿ ಸುಮ್ಮನೆ ಮಾಡಿರಲಾರರು, ಇನ್ನು ಒಂದಿಷ್ಟು ಕಾದರೆ ಏನು?’ ಎಂದು ಕಾಯುತ್ತಿರುವ ಮಧ್ಯಮ ವರ್ಗದ ಮೋದಿ ಭಕ್ತರೂ ಇದ್ದಾರೆ. ಆದರೆ ದೇಶದ ಅರ್ಥ ವ್ಯವಸ್ಥೆಯೇ ಬುಡಮೇಲಾಗುತ್ತಿದೆ. ರೂಪಾಯಿ ದಿನದಿಂದ ದಿನಕ್ಕೆ ನೆಲ ಕಚ್ಚುತ್ತಿದೆ. ದೇಶ ಭವಿಷ್ಯ ದುರ್ಬಲಗೊಳ್ಳುತ್ತಿರುವುದು ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ತಾವು ಉಕ್ಕಿನ ಮನುಷ್ಯನನ್ನು ಆರಿಸಿದ್ದೇವೆ ಎಂದು ಭಾವಿಸಿ ಅತಿಯಾಗಿಯೇ ಸಂಭ್ರಮಿಸಿದ್ದ ಜನರು, ತಮ್ಮ ಆಯ್ಕೆ ತಪ್ಪು ಎನ್ನುವುದು ಬರೇ ನಾಲ್ಕು ವರ್ಷಗಳಲ್ಲೇ ಜಾಹೀರಾಗುತ್ತಿರುವುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಚಡಪಡಿಸುತ್ತಿದ್ದಾರೆ. ಭಾಷಣಗಳಿಂದ ಅತ್ಯುತ್ತಮ ಆಡಳಿತ ನೀಡಲು ಸಾಧ್ಯವಿಲ್ಲ ಎನ್ನುವುದು ಅವರಿಗೆ ಕೊನೆಗೂ ಅರಿವಾಗಿದೆ. ಕೆಲವು ಮೋದಿ ಭಕ್ತರು ಅದೆಷ್ಟು ಹತಾಶರಾಗಿದ್ದಾರೆಂದರೆ, ಪೆಟ್ರೋಲ್‌ಗೆ ನೂರು ರೂಪಾಯಿಯಾದರೂ ಸರಿ, ನರೇಂದ್ರ ಮೋದಿಗೆ ಮತ ಹಾಕುತ್ತೇವೆ ಎಂಬಂತಹ ಮಾತುಗಳನ್ನಾಡುತ್ತಾ, ದೇಶಕ್ಕಿಂತ ವ್ಯಕ್ತಿಯನ್ನು ದೊಡ್ಡವನನ್ನಾಗಿಸುವ ಪ್ರಯತ್ನದಲ್ಲಿದ್ದಾರೆ.

2018ನೇ ಇಸವಿಗೆ ಬಂದು ನಿಂತಿರುವ ನಾವು, 2013ನೇ ಇಸವಿಯೆಡೆಗೆ ಹಿಂದಿರುಗಿ ನೋಡಿದರೆ, ಅದು ನಾವು ಮೋಸ ಹೋದ ವರ್ಷವೆಂದು ಅನಿಸದೆ ಇರಲಾರದು. ಮೋದಿ ಆಡಳಿತದಲ್ಲಿ ಅರ್ಥಶಾಸ್ತ್ರಜ್ಞರು ಮಾತನಾಡಿರುವುದು ಕಡಿಮೆ. ಅವರ ಬದಲಿಗೆ ರಾಮ್‌ದೇವ್, ರವಿಶಂಕರ್‌ರಂತಹ ಬಾಬಾಗಳು ಮಾತನಾಡತೊಡಗಿದರು. ನೋಟು ನಿಷೇಧವಾದಾಗ ಡಾಲರ್‌ನ ಎದುರು ಭಾರತೀಯ ಕರೆನ್ಸಿ ವೌಲ್ಯವು 40 ರೂ. ಆಗುವ ದಿನಗಳು ದೂರವಿಲ್ಲವೆಂದು ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಭರವಸೆ ನೀಡಿದ್ದರು. ರಾಮ್‌ದೇವ್ ಅವರಂತೂ ಯುವಜನರಿಗೆ ಲೀಟರ್‌ಗೆ 35 ರೂ.ದರದಲ್ಲಿ ಪೆಟ್ರೋಲ್ ಲಭ್ಯವಾಗುವಂತೆ ಮಾಡುವುದಾಗಿ ಭರವಸೆ ನೀಡಿದ್ದರು.. ಈಗ ಅವರೆಲ್ಲ ಯೋಗಗಳ ವಿವಿಧ ಭಂಗಿಗಳಲ್ಲಿ ಅಡಗಿಕೊಂಡಿದ್ದಾರೆ. 35 ರೂ.ಗೆ ಪೆಟ್ರೋಲ್ ಮಾರಾಟ ಮಾಡುವ ಭರವಸೆ ನೀಡಿದವರೇ ಈಗ 86 ರೂ.ತೆತ್ತು ಪೆಟ್ರೋಲ್ ಖರೀದಿಸುತ್ತಿದ್ದಾರೆ. ಈಗ ಕೇಂದ್ರ ಸರಕಾರದಲ್ಲಿರುವ ಎಲ್ಲರೂ ಪಾತಾಳಕ್ಕಿಳಿದಿರುವ ರೂಪಾಯಿ ವೌಲ್ಯ ಅಥವಾ ಗಗನಕ್ಕೇರುತ್ತಿರುವ ಪೆಟ್ರೋಲ್ ದರದ ಬಗ್ಗೆ ಪ್ರತಿಕ್ರಿಯಿಸುವುದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಇನ್ನಾವುದೋ ಬೇರೆ ವಿಷಯಗಳಿಗಾಗಿ ತಡಕಾಡುತ್ತಿದ್ದಾರೆ. ಜನರು ಕೂಡಾ ತೈಲ ದರ ಏರಿಕೆ, ರೂಪಾಯಿ ವೌಲ್ಯ ಪತನದ ಬಗ್ಗೆ ಮಾತನಾಡುವುದನ್ನೇ ಬಿಟ್ಟುಬಿಡತೊಡಗಿದ್ದಾರೆ. ಅವರು ಹಾಲಿ ಸರಕಾರದ ಬಗ್ಗೆ ಭಯಭೀತ ಮನಸ್ಥಿತಿಯನ್ನು ಬೆಳೆಸಿಕೊಂಡಿರುವುದಕ್ಕೆ ಇದೊಂದು ನಿದರ್ಶನವಾಗಿದೆ.

   ಹಾಲಿ ವಿತ್ತ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ದೇಶದ ಜಿಡಿಪಿಯು ಶೇ.8.2ರಷ್ಟು ಏರಿಕೆ ಕಾಣುತ್ತಿದ್ದಂತೆಯೇ, ಸರಕಾರದ ವಲಯಗಳಲ್ಲಿ ಸಂಭ್ರಮದ ವಾತಾವರಣ ಮೂಡಿತ್ತು. ಇದೇ ಅವಧಿಯಲ್ಲಿ ಉದ್ಯೋಗದ ಪ್ರಮಾಣದಲ್ಲಿ ಶೇ.1ರಷ್ಟು ಇಳಿಕೆಯಾಗಿತ್ತು. 2017ರ ಜುಲೈ ಹಾಗೂ 2018ರ ಜುಲೈ ನಡುವೆ, ಉದ್ಯೋಗಗಳನ್ನು ಹೊಂದಿರುವವರ ಸಂಖ್ಯೆಯಲ್ಲಿ 1.4 ಶೇಕಡದಷ್ಟು ಇಳಿಕೆಯಾಗಿತ್ತು. 2018ರ ಆಗಸ್ಟ್‌ನಲ್ಲಿ ಉದ್ಯೋಗ ಪ್ರಮಾಣದಲ್ಲಿ ಶೇ.1.2ರಷ್ಟು ಕುಸಿತವುಂಟಾಗಿದ್ದು, ದ್ವಿತೀಯ ತ್ರೈಮಾಸಿಕದಲ್ಲಿಯೂ ಉದ್ಯೋಗ ಪ್ರಮಾಣದಲ್ಲಿ ಇಳಿಮುಖ ಕಂಡುಬರಲಿದೆಯೆಂದು ಕೆಲವೇ ದಿನಗಳ ಹಿಂದೆ, ಇಂಡಿಯನ್ ಇಕಾನಮಿ ಪ್ರೈ.ಲಿಮಿಟೆಡ್ (ಸಿಎಂಐಇ)ನ ಆಡಳಿತ ನಿರ್ದೇಶಕ ಹಾಗೂ ಸಿಇಒ ಆಗಿರುವ ಮಹೇಶ್ ವ್ಯಾಸ್ ಎಚ್ಚರಿಕೆ ನೀಡಿದ್ದರು.

ಹಾಗೆ ನೋಡಿದರೆ 2017ರ ನವೆಂಬರ್‌ನಿಂದಲೇ ಉದ್ಯೋಗದ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿತ್ತು. ನೋಟು ಅಮಾನ್ಯದ ಬಳಿಕ ಕಾರ್ಮಿಕ ಶಕ್ತಿಯಲ್ಲಿ ಕುಸಿತ ಕಂಡುಬಂದಿತ್ತು. ಉದ್ಯೋಗ ಲಭಿಸುವ ಭರವಸೆ ಕಳೆದುಕೊಂಡ ಲಕ್ಷಾಂತರ ಜನರು ಶ್ರಮಿಕ ಮಾರುಕಟ್ಟೆಯಿಂದ ದೂರ ಸರಿದರು. ಇದೀಗ, ನಿರುದ್ಯೋಗಿಗಳು ಉದ್ಯೋಗ ಬಯಸಿ ಶ್ರಮಿಕ ಮಾರುಕಟ್ಟೆಗೆ ವಾಪಸಾಗಿದ್ದಾರೆ. ಆದರೆ, ಉದ್ಯೋಗಗಳು ಲಭಿಸುತ್ತಿಲ್ಲ. ಯುವಕರು ಗೋರಕ್ಷಣೆ, ಸಂಸ್ಕೃತಿ ರಕ್ಷಣೆ ಮೊದಲಾದ ಹೆಸರಿನಲ್ಲಿ ಗುಂಪು ಕಟ್ಟಿಕೊಂಡು ಪರ್ಯಾಯ ಪೊಲೀಸ್ ಉದ್ಯೋಗಗಳನ್ನು ಮಾಡಲು ಹೊರಟಿದ್ದಾರೆ. ಇವೆಲ್ಲದರಿಂದ ಭ್ರಮನಿರಸನ ಗೊಂಡ ದೇಶವನ್ನು ವಲ್ಲಭಭಾಯ್ ಪಟೇಲ್ ಪ್ರತಿಮೆಯಿಂದ, ಶಿವಾಜಿ ಪಾರ್ಕ್‌ನಿಂದ, ರಾಮಾಯಣ ಮ್ಯೂಸಿಯಂನಿಂದ ಸಮಾಧಾನ ಪಡಿಸಲು ಸರಕಾರ ಮುಂದಾಗಿದೆ. ಹಾಗೆಯೇ ಅರ್ಥವ್ಯವಸ್ಥೆಯ ಬಗ್ಗೆ ತಪ್ಪು ಹೇಳಿಕೆಗಳನ್ನು ನೀಡಿ ಜನರನ್ನು ಗೊಂದಲದಲ್ಲಿ ಸಿಲುಕಿಸಲು, ಅವರನ್ನು ಮಾತನಾಡದಂತೆ ಬಾಯಿ ಮುಚ್ಚಿಸಲು ಯತ್ನಿಸುತ್ತಿದ್ದಾರೆ.

ಕೇಂದ್ರ ಸಚಿವರೊಬ್ಬರು, ರೂಪಾಯಿಗೆ ಏನೂ ಆಗಿಲ್ಲ, ಸಮಸ್ಯೆಯಿರುವುದು ಡಾಲರ್‌ನಲ್ಲಿ ಎಂದರು. ಕೇಂದ್ರ ನಾಗರಿಕ ವಾಯುಯಾನ ಸಚಿವ ಜಯಂತ್ ಸಿನ್ಹಾ ಅವರು ಹೋದಲ್ಲೆಲ್ಲಾ, ಈಗ ವಿಮಾನಯಾನದರಗಳು ಆಟೊ ರಿಕ್ಷಾ ದರಕ್ಕಿಂತಲೂ ಅಗ್ಗವಾಗಿದೆಯೆಂದು ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ನಡುವೆ, ನೀತಿ ಆಯೋಗದ ಅಧ್ಯಕ್ಷರಾದ ರಾಜೀವ್ ಕುಮಾರ್ ಅವರು ಅಗತ್ಯಬಿದ್ದಲ್ಲಿ, ಇನ್ನೊಂದು ಹಂತದ ನಗದು ಅಮಾನ್ಯತೆಗೆ ಸರಕಾರದ ಸಿದ್ಧವಿರುವುದಾಗಿ ಹೇಳಿದ್ದಾರೆ. ಈಗಾಗಲೇ ದೇಶದ ಆರ್ಥಿಕತೆಯನ್ನು ನಿಸ್ತೇಜಗೊಳಿಸಿರುವ ನೋಟು ನಿಷೇಧದ ದುಷ್ಪರಿಣಾಮವನ್ನು ನೇರವಾಗಿ ಅನುಭವಿಸಿರುವ ದೇಶದ ಜನತೆಯ ಸ್ಥಿತಿ ಈಗ ಎರಡನೆ ಹಂತದ ನೋಟು ನಿಷೇಧದಿಂದ ಯಾವ ಮಟ್ಟಿಗೆ ತಲುಪಬಹುದು ಎಂಬುದನ್ನೂ ಊಹಿಸಲೂ ಸಾಧ್ಯವಿಲ್ಲ.

ಕಾಂಗ್ರೆಸ್ ಭಾರತ ಬಂದ್ ಘೋಷಿಸಿದೆ. ಆದರೆ ಇದಕ್ಕೆ ಮೊದಲೇ ಮೋದಿ ನೇತೃತ್ವದಲ್ಲಿ ಅಘೋಷಿತ ಭಾರತ ಬಂದ್ ನಡೆಯುತ್ತಿದೆ. ತನ್ನ ವಿಫಲ ಆರ್ಥಿಕ ನೀತಿಯ ಮೂಲಕ ಮೋದಿ ಘೋಷಿಸಿರುವ ಭಾರತ ಬಂದ್‌ನ ವಿರುದ್ಧ ಜನಸಾಮಾನ್ಯರು ಬಂದ್ ಘೋಷಿಸುವುದು ಅನಿವಾರ್ಯವಾಗಿದೆ. ಆ ಮೂಲಕ, ಪ್ರಧಾನಿ ಮೋದಿಯ ಮುಚ್ಚಿರುವ ಬಾಯಿ ತೆರೆಯಬೇಕಾಗಿದೆ. ಅವರ ವೌನವನ್ನು ಮುರಿಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News