ಡಾಲರ್ ಮುಂದೆ ರೂಪಾಯಿ ಮೌಲ್ಯ 72.30 ರೂ.ಗಳಿಗೆ ಕುಸಿತ

Update: 2018-09-10 18:19 GMT

ಮುಂಬೈ, ಸೆ.10: ನಿರಂತರ ಏರುತ್ತಿರುವ ಕಚ್ಛಾತೈಲದ ಬೆಲೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್‌ಗೆ ಬೇಡಿಕೆ ಹೆಚ್ಚಾಗಿರುವುದು ಹಾಗೂ ಚಾಲ್ತಿಖಾತೆಯ ಕೊರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯದಲ್ಲಿ ಸೋಮವಾರ 91 ಪೈಸೆಯಷ್ಟು ಕುಸಿತವಾಗಿದ್ದು ಡಾಲರ್ ಎದುರು ರೂಪಾಯಿ ಮೌಲ್ಯ 72.64 ರೂ.ಗೆ ಕುಸಿದಿದೆ.

ಕಳೆದ ಶುಕ್ರವಾರ ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯದಲ್ಲಿ ರೂಪಾಯಿ ಮೌಲ್ಯ 71.73 ರೂ.ಗೆ ಇಳಿದಿತ್ತು. ಸೋಮವಾ ಮತ್ತೆ 91 ಪೈಸೆಯಷ್ಟು ಕುಸಿದು 72.64 ರೂ.ಗೆ ತಲುಪಿದೆ. ಸೋಮವಾರ ಭಾರತ್ ಬಂದ್, ತೈಲ ಬೆಲೆ ಹೆಚ್ಚಳದ ಪರಿಣಾಮ ಹೂಡಿಕೆದಾರರು ನಿರಾಸಕ್ತಿ ತೋರಿದ್ದರಿಂದ ವಹಿವಾಟಿನ ಆರಂಭದಲ್ಲೇ ಬಿಎಸ್‌ಇ ಸೆನ್ಸೆಕ್ಸ್ 238.01 ಅಂಕಗಳಷ್ಟು ಕುಸಿತ ಕಂಡಿದ್ದು 38,151.18ರಲ್ಲಿ ವಹಿವಾಟು ನಡೆದಿದೆ ಎಂದು ಮೂಲಗಳು ತಿಳಿಸಿವೆ. ಭಾರತದ ಚಾಲ್ತಿಖಾತೆಯ ಕೊರತೆ(ಸಿಎಡಿ) ಈ ವರ್ಷದ ಎಪ್ರಿಲ್-ಜೂನ್ ಅವಧಿಯಲ್ಲಿ 15 ಬಿಲಿಯನ್ ಡಾಲರ್‌ನಷ್ಟಾಗಿದ್ದು, 2017-18ರ ಇದೇ ಅವಧಿಯಲ್ಲಿ 15 ಬಿಲಿಯನ್ ಡಾಲರ್ ಆಗಿತ್ತು ಎಂದು ಶುಕ್ರವಾರ ಬಿಡುಗಡೆ ಮಾಡಿರುವ ಆರ್‌ಬಿಐ ವರದಿಯಲ್ಲಿ ತಿಳಿಸಲಾಗಿದೆ. ದೇಶೀಯ ಮಾರುಕಟ್ಟೆಯ ಪರಿಸ್ಥಿತಿ, ಕರೆನ್ಸಿ ಬಿಕ್ಕಟ್ಟು ಉಂಟಾಗಬಹುದು ಎಂಬ ಭೀತಿಯ ಮಧ್ಯೆಯೂ ಹೆಚ್ಚುತ್ತಿರುವ ಡಾಲರ್‌ನ ಪ್ರಭಾವ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣಗಳಾಗಿವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಂಘರ್ಷವೂ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News