ಬೇಡಿಕೆ ಈಡೇರಿಕೆಯ ಭರವಸೆ ನೀಡಿದ ಸಚಿವ ಜಿ.ಟಿ ದೇವೇಗೌಡ: ಮೈಸೂರು ವಿವಿ ಪೌರಕಾರ್ಮಿಕರ ಧರಣಿ ಅಂತ್ಯ

Update: 2018-09-10 17:17 GMT

ಮೈಸೂರು,ಸೆ.10: ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಉನ್ನತ ಶಿಕ್ಷಣ ಹಾಗೂ ಮೈಸೂರು ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ನೀಡಿದ ಭರವಸೆಗೆ ಒಪ್ಪಿ ಕಳೆದ ಆರು ದಿನಗಳಿಂದ ನಡೆಸುತ್ತಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪೌರಕಾರ್ಮಿಕರ ಅಹೋರಾತ್ರಿ ಪ್ರತಿಭಟನೆ ಅಂತ್ಯಗೊಂಡಿತು.

ಮಾನಸ ಗಂಗೋತ್ರಿಯ ಕುವೆಂಪು ಪ್ರತಿಮೆ ಬಳಿ ನಡೆಯುತ್ತದ್ದ ಪ್ರತಿಭಟನಾ ಸ್ಥಳಕ್ಕೆ ಸೋಮವಾರ ಆಗಮಿಸಿದ ಸಚಿವ ಜಿ.ಟಿ.ದೇವೇಗೌಡ ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಕಳೆದ 14 ವರ್ಷಗಳಿಂದ ನಾವು ಸ್ವಚ್ಛತಕಾರ್ಯದಲ್ಲಿ ತೊಡಗಿದ್ದೇವೆ. ನಮ್ಮನ್ನು ಏಕಾಏಕಿ ತೆಗೆದು ಹಾಕಿ ಟೆಂಡರ್ ಕರೆದು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಮೈಸೂರು ವಿವಿ ಹೊರಟಿದೆ. ಇದುವರೆಗೂ ನಮಗೆ ಪಿಎಫ್ ಹಣ ನೀಡಿಲ್ಲ. ಪುರುಷರು ಮತ್ತು ಮಹಿಳಾ ಪೌರಕಾರ್ಮಿಕರ ನಡುವೆ ವೇತನ ತಾರತಮ್ಯ ಮಾಡಲಾಗುತ್ತಿದೆ. ನಾವು ಇದನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ದಯವಿಟ್ಟು ಟೆಂಡರ್ ಪ್ರಕ್ರಿಯೆ ಕೈಬಿಟ್ಟು ಹಿಂದೆ ಹೇಗಿತ್ತೋ ಅದೇ ರೀತಿ ನಮ್ಮನ್ನು ಮುಂದುವರೆಸಿ ಎಂದು ಮನವಿ ಮಾಡಿದರು.

ಸಮಸ್ಯೆ ಆಲಿಸಿ ಮಾತನಾಡಿದ ಸಚಿವರು, ತಕ್ಷಣ ಅಲ್ಲಿದ್ದ ಮೈಸೂರು ವಿವಿ ಕುಲಪತಿ ಮತ್ತು ರಿಜಿಸ್ಟ್ರಾರ್ ಅವರಿಗೆ ಕೂಡಲೆ ಟೆಂಡರ್ ಪ್ರಕ್ರಿಯೆ ರದ್ದುಗೊಳಿಸಿ. ಇವರೆಲ್ಲರು ಹಿಂದೆ ಹೇಗೆ ಕೆಲಸ ಮಾಡುತ್ತಿದ್ದರೋ ಅದನ್ನೇ ಮುಂದುವರೆಸಿ ಎಂದು ಸೂಚಿಸಿದರು. ನಿಮಗೆ ಬರಬೇಕಿರುವ ಪಿಎಫ್ ಹಣ ಮತ್ತು ವೇತನ ಹೆಚ್ಚಳ ಕುರಿತು ದಸರಾ ನಂತರ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಇದಕ್ಕೆ ಒಪ್ಪಿದ ಪೌರಕಾರ್ಮಿಕರು ನಿಮ್ಮ ಮಾತುಗಳನ್ನು ನಂಬುತ್ತೇವೆ. ದಯವಿಟ್ಟು ನಮ್ಮ ಹೊಟ್ಟೆ ಮೇಲೆ ಹೊಡೆಯುವ ಕೆಲಸಗಳನ್ನು ಮಾಡದಂತೆ ಅಧಿಕಾರಿಗಳಿಗೆ ಸೂಚಿಸಿ ಎಂದು ನಮ್ಮ ಮುಷ್ಕರವನ್ನು ಕೈಬಿಡುವುದಾಗಿ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಟಿ.ಕೆ.ಉಮೇಶ್, ರಿಜಿಸ್ಟ್ರಾರ್ ಪ್ರೊ.ರಾಜಣ್ಣ, ಪತ್ರಿಕೋಧ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರಗುರು, ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್, ಪ್ರಗತಿಪರ ಚಿಂತಕ ದಿಲೀಪ್ ನರಸಯ್ಯ, ಎಐಡಿಎಸ್‍ಒ ಜಿಲ್ಲಾ ಸಂಚಾಲಕ ಚಂದ್ರಶೇಖರ್ ಮೇಟಿ, ಎಐಟಿಯುಸಿ ಸಂಘಟನೆಯ ಕಾರ್ಯದರ್ಶಿ ಕಲ್ಪನಾ, ಉಷಾರಾಣಿ, ಉಪಾಧ್ಯಕ್ಷೆ ಯಶೋಧರ, ಸುಶೀಲಮ್ಮ, ಸೇರಿದಂತೆ ಹಲವರು ಹಾಜರಿದ್ದರು.

ಮೈಸೂರು ವಿ.ವಿ. ರಿಜಿಸ್ಟ್ರಾರ್ ಬೆವರಿಳಿಸಿದ ಪ್ರೊ.ಮಹೇಶ್ ಚಂದ್ರಗುರು
ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರ ಮುಂದೆಯೇ ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೊ.ರಾಜಣ್ಣ ಅವರನ್ನು ಪ್ರೊ.ಮಹೇಶ್ ಚಂದ್ರಗುರು ಹಿಗ್ಗಾಮುಗ್ಗಾ ಬೈದು ಬೆವರಿಳಿಸಿದ ಘಟನೆ ನಡೆಯಿತು.

ಮಾನಸ ಗಂಗೋತ್ರಿಯ ಪೌರಕಾರ್ಮಿಕರ ಪ್ರತಿಭಟನಾ ಸ್ಥಳಕ್ಕೆ ಸಚಿವರು ಆಗಮಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ ನಂತರ ಪ್ರೊ.ಮಹೇಶ್ ಚಂದ್ರಗುರು ಅವರು ಪ್ರತಿಭಟನಾ ನಿರತರನ್ನು ಕುರಿತು ಮಾತನಾಡಲು ಶುರುಮಾಡಿದರು. 'ಮಾನ್ಯ ಸಚಿವರು ವಿವಿ ರಿಜಿಸ್ಟ್ರಾರ್ ಅವರನ್ನು ಕೂಡಲೇ ಬದಲಾಯಿಸಬೇಕು. ಈತನಿಂದಲೇ ಇಂತಹ ಪ್ರಮಾದಗಳು ನಡೆಯುತ್ತಿವೆ. ಪೌರಕಾರ್ಮಿಕರು ಇರುವುದರಿಂದಲೇ ಮೈಸೂರು ವಿವಿ ಸ್ವಚ್ಛತೆಯಿಂದ ಕೂಡಿರುವುದು. ಇಂತಹವರ ಬದುಕಿನ ಜೊತೆ ಚೆಲ್ಲಾಟವಾಡಿ ಹಣದ ಧಂದೆಗೆ ಇಳಿದಿರುವ ರಾಜಣ್ಣನನ್ನು ಕೂಡಲೇ ಕಿತ್ತೆಸೆಯಿರಿ ಎಂದು ಆಗ್ರಹಿಸಿದರು.

ಸ್ಥಳದಲ್ಲೇ ಇದ್ದ ರಿಜಿಸ್ಟ್ರಾರ್ ರಾಜಣ್ಣ ಸಮಜಾಯಿಷಿ ಕೊಡಲು ಮುಂದಾಗುತ್ತಿದ್ದಂತೆ ಮತ್ತಷ್ಟು ಕೋಪಗೊಂಡ ಮಹೇಶ್ ಚಂದ್ರಗುರು, 'ಏಯ್ ಬಾಯಿ ಮುಚ್ಚಪ್ಪ. ನೀನು ಇಂತಹ ಬಡವರ ಹೊಟ್ಟೆಮೇಲೆ ಹೊಡೆದು ದುಡ್ಡುಮಾಡುವುದು ಬೇಡ. ಇವರನ್ನು ನೋಡಿದರೆ ನಿನಗೆ ಅಯ್ಯೋ ಅನಿಸುವುದಿಲ್ಲವೆ, ಟೆಂಡರ್ ಕರೆದು ಕೋಟಿಗಟ್ಟಲೆ ಹಣ ಮಾಡಲು ಮುಂದಾಗಿರುವುದು ಗೊತ್ತಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವರ ಭರವಸೆ ನಂಬಿ ಪ್ರತಿಭಟನೆ ಕೈಬಿಡುತ್ತಿದ್ದೇವೆ. ಮೈಸೂರು ವಿವಿ ಅಧಿಕಾರಿಗಳ ಮೇಲೆ ನಮಗೆ ಇನ್ನೂ ನಂಬಿಕೆ ಇಲ್ಲ. ಆದರೂ ಸಹ ಸಚಿವರ ಮಾತಿಗೆ ಬೆಲೆಕೊಡುತ್ತೇವೆ. ನಮ್ಮ ಸಮಸ್ಯೆಗಳನ್ನು ದಸರಾ ಹಬ್ಬದ ನಂತರ ಬಗೆಹರಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ನಮ್ಮೆಲ್ಲಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲರಾದರೆ ಮುಂದೆ ಇದಕ್ಕಿಂತಲೂ ಉಗ್ರ ಹೋರಾಟ ಮಾಡಲಾಗುತ್ತದೆ. 
-ಸುಶೀಲ, ವಿವಿ ಸ್ವಚ್ಛತಾ ಕಾರ್ಯಕರ್ತರ ಮುಖಂಡೆ

ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ನಮ್ಮ ಸಮಸ್ಯೆ ಈಡರದಿದ್ದರೆ ಮುಂದಿನ ದಿನಗಳಲ್ಲಿ ಯಾವ ಹಂತದ ಹೋರಾಟ ಮಾಡಬೇಕು ಎಂದು ತೀರ್ಮಾನಿಸುತ್ತೇವೆ. ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು.
-ಸುಮ, ವಿವಿ ಸ್ವಚ್ಛತಾ ಕಾರ್ಯಕರ್ತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News