ಮೈಸೂರು: ಭಾರತ್ ಬಂದ್ ಯಶಸ್ವಿ

Update: 2018-09-10 17:26 GMT

ಮೈಸೂರು,ಸೆ.10: ತೈಲ ಬೆಲೆ ನಿರಂತರ ಏರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಕರೆ ನೀಡಿದ್ದ ಭಾರತ ಬಂದ್ ಮೈಸೂರಿನಲ್ಲಿ ಯಶಸ್ವಿಯಾಗಿದೆ.

ಮುಂಜಾನೆ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಮಾವೇಶಗೊಂಡು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದು, ಕಾಂಗ್ರೆಸ್, ಜೆಡಿಎಸ್ ಪಕ್ಷಗಳೊಟ್ಟಿಗೆ ಸಿಪಿಐಎಂ, ಸಿಪಿಐ, ಓಲಾಕ್ಯಾಬ್ ಹಾಗೂ ಆಟೋಚಾಲಕ ಮಾಲಕರ ಸಂಘ, ಸಾರಿಗೆ ನೌಕರರ ಸಂಘ, ದಲಿತ ಸಂಘರ್ಷ ಸಮಿತಿ, ಚಲನಚಿತ್ರ ಮಾಲಕರ ಸಂಘ, ಪೆಟ್ರೋಲ್ ಬಂಕ್ ಮಾಲಕರ ಸಂಘ, ಖಾಸಗಿ ಬಸ್ ಮಾಲಕರ ಸಂಘ, ಕನ್ನಡ ಸಂಘಟನೆಗಳು, ಹೋಟೆಲ್ ಮಾಲಕರ ಸಂಘ ಕೈಜೋಡಿಸಿದವು. ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಂದ್‍ಗೆ ಬೆಂಬಲ ಸೂಚಿಸಿದವು. ಫುಟ್‍ಪಾತ್‍ ಅಂಗಡಿಗಳು ಸಂಪೂರ್ಣವಾಗಿ ಮುಚ್ಚಿದ್ದವು.

ಮೈಸೂರಿನ ಸಬರ್ಬ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆಯಲ್ಲಿ ತೊಡಗಿದ ನಾಯಕರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು “ಭಾಯಿಯೋ ಔರ್ ಬೆಹೆನೋ” ಎಂದು ಹೇಳಿ ಜನರನ್ನು ಮರಳು ಮಾಡುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆ ಇದ್ದರೂ ವಿನಾಕಾರಣ ತೈಲ ಬೆಲೆ ಏರಿಕೆ ಮಾಡುತ್ತಿದೆ. ಮೋದಿ ನಾನು ಮಧ್ಯಮ ವರ್ಗದ ಜನರ ರಕ್ಷಣೆಗಾಗಿ ಅಧಿಕಾರಕ್ಕೆ ಬಂದಿದ್ದೇನೆ ಎಂದು ಹೇಳುವುದು ಬರೀ ನಾಟಕ. ಅವರು ಒಂದು ಕಡೆ  ದೊಣ್ಣೆ ಹಿಡಿದು ಮತ್ತೊಂದು ಕಡೆ ಕೈ ಎತ್ತಿ ನಮಸ್ಕಾರ ಮಾಡುವ ಕಲೆ ಹೊಂದಿರುವವರು ಎಂದು ಕಿಡಿಕಾರಿದರು.

ನ್ಯೂ ಸೈಯ್ಯಾಜೀ ರಾವ್ ರಸ್ತೆಯಲ್ಲಿಯೂ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದು, ರಸ್ತೆಯಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ರಸ್ತೆ ಮಧ್ಯೆಯೇ ಟಾಂಗಾ ಗಾಡಿಗಳನ್ನು ನಿಲ್ಲಿಸಿದರು. ಚಾಮರಾಜ ಕ್ಷೇತ್ರದ ಮಾಜಿ ಶಾಸಕ ವಾಸು ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. 'ಹಿಂದಿನ ಕಾಲದಲ್ಲಿ ಸಾರಿಗೆಗಾಗಿ ಟಾಂಗ ಮತ್ತು ಎತ್ತಿನಗಾಡಿಗಳನ್ನು ಬಳಸಲಾಗುತ್ತಿತ್ತು. ಅದನ್ನು ಸಾಂಕೇತಿಕವಾಗಿ ಬಳಸಲಾಗುತ್ತಿದೆ. ಪೆಟ್ರೋಲ್ ಬೆಲೆ ಸಾರ್ವತ್ರಿಕ ದಾಖಲೆ ಕಾಣಲು ಬಿಜೆಪಿಯೇ ಕಾರಣ' ಎಂದರು. ಕೆಲವೆಡೆ ಕೇಂದ್ರ ಸರ್ಕಾರದ ನಾಯಕರ ಪ್ರತಿಕೃತಿ ದಹಿಸಿದರೆ, ಇನ್ನು ಕೆಲವು ಕಡೆ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಟಾಂಗ ಮತ್ತು ಎತ್ತಿನಗಾಡಿ ಏರಿದ ಮಾಜಿ ಸಚಿವರು: ಬನ್ನಿಮಂಟಪದಲ್ಲಿರುವ ಕೆಎಸ್ಆರ್ಟಿಸಿ ಡಿಪೋ ಮುಂಭಾಗ ಮಾಜಿ ಸಚಿವ ತನ್ವೀರ್ ಸೇಠ್ ಕುದುರೆ ಗಾಡಿ ಹತ್ತಿ ಪ್ರತಿಭಟನೆ ನಡೆಸಿದರೆ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಎತ್ತಿನಗಾಡಿ ಏರಿಕೊಂಡು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಶಾಲಾ ಕಾಲೇಜುಗಳು ಬಂದ್: ಮೈಸೂರು ನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಲಾ ಕಾಲೇಜುಗಳು ಮುಚ್ಚಿದ್ದವು.

ಬಸ್ ಸಂಚಾರ ಸ್ಥಗಿತ: ಬಂದ್ ಹಿನ್ನಲೆಯಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಹಾಗಾಗಿ ನಗರ ಪ್ರದೇಶ ಸೇರಿದಂತೆ ಜಿಲ್ಲೆಯ ಯಾವ ಸ್ಥಳಗಳಿಗೂ ಬಸ್ ಸಂಚಾರ ಇಲ್ಲದೆ ಸಾರ್ವಜನಿಕರು ಪರದಾಡುವಂತಾಯಿತು.

ಬಿಗಿ ಬಂದೋಬಸ್ತ್: ನಗರದೆಲ್ಲೆಡೆ ಪೊಲೀಸರು ನಿಯೋಜನೆಗೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದರು. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ಹಾಕಿ ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿತ್ತು.

ಪ್ರತಿಭಟನೆಯಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್, ಶಾಸಕ ತನ್ವೀರ್ ಸೇಠ್, ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್, ವಾಸು, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಕೆಪಿಸಿಸಿ ಸದಸ್ಯ ಎನ್.ಭಾಸ್ಕರ್, ಶ್ರೀನಾಥ್ ಬಾಬು, ಪ್ರಶಾಂತ್‍ಗೌಡ, ಡಿ.ನಾಗಭೂಷಣ್, ಡಿ.ಧ್ರುವಕುಮಾರ್, ಅಯೂಬ್ ಖಾನ್, ಶೌಕತ್ ಅಲಿಖಾನ್, ಗುರುಪಾದಸ್ವಾಮಿ, ಸುರೇಶ್, ಟಿ.ಬಿ.ಚಿಕ್ಕಣ್ಣ, ಸೇರಿದಂತೆ ಹಲವರು ಭಾಗವಹಿಸಿದ್ದರು.

ಬೈಕ್ ಹರಾಜು ಹಾಕುವ ಮೂಲಕ ವಿನೂತನ ಪ್ರತಿಭಟನೆ
ತೈಲ ದರ ಏರಿಕೆ ಖಂಡಿಸಿ ಕಾಂಗ್ರೆಸ್ ನೀಡಿರುವ ಬಂದ್ ಕರೆಗೆ ಕನ್ನಡ ಸಂಘಟನೆಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದ್ದು, ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದೆ.

ನಗರದ ಅಗ್ರಹಾರದ ವೃತ್ತದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ದ್ವಿಚಕ್ರ ವಾಹನಗಳನ್ನು ಹರಾಜು ಮಾಡುವ ಅಣುಕು ಪ್ರದರ್ಶನ ನಡೆಸಿದರು. ಕೇವಲ 100ರೂಗಳಿಗೆ ಬೈಕ್ ಹರಾಜು ಮಾಡಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಪೆಟ್ರೋಲ್ ಬೆಲೆಯನ್ನು ಇಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News