ಕೊಪ್ಪ: ಭಾರತ್ ಬಂದ್‍ಗೆ ಉತ್ತಮ ಪ್ರತಿಕ್ರಿಯೆ

Update: 2018-09-10 17:32 GMT

ಕೊಪ್ಪ,ಸೆ.10: ಪೆಟ್ರೋಲ್ ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆಯೇರಿಕೆ ವಿರೋಧಿಸಿ ಅಖಿಲ ಭಾರತೀಯ ಕಾಂಗ್ರೆಸ್ ಕರೆನೀಡಿದ್ದ ಭಾರತ್ ಬಂದ್‍ಗೆ ಕೊಪ್ಪದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾವುದೇ ಆಹಿತಕರ ಘಟನೆಗಳು ನಡೆಯದೇ ಶಾಂತಿಯುತವಾಗಿ ನಡೆಯಿತು. 

ಬಂದ್ ಪ್ರಯುಕ್ತ ಬೆಳಿಗ್ಗೆ 8ರಿಂದ ಸಂಜೆ 3ರವರೆಗೆ ಕೊಪ್ಪ, ಹರಿಹರಪುರ, ಕಮ್ಮರಡಿ, ನಿಲುವಾಗಿಲು, ಕುದುರೆಗುಂಡಿ, ನಾರ್ವೆ ಸೇರಿದಂತೆ ಎಲ್ಲಾ ಕಡೆ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದರಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಹೋಟೆಲ್‍ಗಳು ಬಂದ್ ಆಗಿತ್ತು. ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳು ಮುಚ್ಚಿದ್ದವು. ಬಸ್‍ಗಳ ಸಂಚಾರ ನಿಲ್ಲಿಸಿದ್ದವು. ಜನಸಂಚಾರವಿಲ್ಲದೇ ಪಟ್ಟಣದ ಬಸ್‍ನಿಲ್ದಾಣದ ಬಿಕೋ ಅನ್ನುತ್ತಿತ್ತು. ಶಾಂತಿ ಭಂಗವಾಗದಂತೆ ಆಯಕಟ್ಟಿನ ಜಾಗಗಳಲ್ಲಿ ಪೊಲೀಸ್ ನಿಯೋಜಿಸಲಾಗಿತ್ತು. ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್ ಮತ್ತು ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಬಂದ್‍ಗೆ ಜೆಡಿಎಸ್, ರೈತಸಂಘ, ಹಸಿರುಸೇನೆ, ಬಿಎಸ್‍ಪಿ, ಕರವೇ ಮತ್ತಿತತರ ಸಂಘಟನೆಗಳು ಬೆಂಬಲ ನೀಡಿದ್ದವು.

ಬಂದ್ ಅವಧಿ ಮುಗಿದು ಮಧ್ಯಾಹ್ನ 3ರ ಬಳಿಕ ವರ್ತಕರು ವ್ಯಾಪರ ವಹಿವಾಟು ಪ್ರಾರಂಭಿಸಿದರು. ಸಂಜೆಯ ಹೊತ್ತಿಗೆ ಬಂದ್‍ನ ಯಾವುದೇ ಲಕ್ಷಣಗಳು ಕಾಣಲಿಲ್ಲ. ಬಸ್ ಸಂಚಾರವಿಲ್ಲದ ಕಾರಣ ಖಾಸಗಿ ವಾಹನಗಳು, ಅಟೋರಿಕ್ಷಾಗಳಿಗೆ ಹೆಚ್ಚಿನ ಬೇಡಿಕೆ ಇರುವುದು ಕಂಡುಬಂತು. ಬಂದ್ ಬಗ್ಗೆ ಮುಂಚಿತವಾಗಿ ಪ್ರಚಾರ ಕೊಟ್ಟಿದ್ದರಿಂದ ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗಿಲ್ಲ.

ಬಂದ್‍ಗೆ ಅಟೋಚಾಲಕರ ಸಂಘ ವಿರೋಧ: ಕಾಂಗ್ರೆಸ್ ಕರೆನೀಡಿದ್ದ ಭಾರತ್ ಬಂದ್‍ಗೆ ಕೊಪ್ಪ ಅಟೋಚಾಲಕರ ಮತ್ತು ಮಾಲಕರ ಸಂಘ ವಿರೋಧ ವ್ಯಕ್ತಪಡಿಸಿತ್ತು. ಬಂದ್ ಧಿಕ್ಕರಿಸಿ ಬೆಳಿಗ್ಗೆಯಿಂದಲೂ ಅಟೋ ಸಂಚಾರ ನಡೆಸಿದರು. ತಮ್ಮ ವಿರೋಧದ ಕುರಿತು ಪ್ರತಿಕ್ರಿಯಿಸಿದ ಅಟೋಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಯು.ಪಿ. ವಿಜಯಕುಮಾರ್, 'ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಪೆಟ್ರೋಲ್ ಬೆಲೆ ರೂ. 83ಕ್ಕೆ ಏರಿಕೆಯಾಗಿತ್ತು. ಈಗ ರೂ.82 ಇದೆ. ಅಂದಿಗಿಂತ ಇನ್ನೂ ರೂ.1 ಕಡಿಮೆಯಿದೆ. ಆವಾಗ ಪ್ರತಿಭಟಿಸದೇ ಇದ್ದವರು ಈಗ ಯಾಕೆ ಪ್ರತಿಭಟಿಸುತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಬಂದ್ ಆಗಿರುವುದರಿಂದ ಇದಕ್ಕೆ ನಮ್ಮ ಬೆಂಬಲ ಇಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News