ಭಾರತ್ ಬಂದ್: ವಿವಿಧ ಪಕ್ಷ, ಸಂಘಟನೆಗಳಿಂದ ಕೇಂದ್ರದ ವಿರುದ್ಧ ಆಕ್ರೋಶ

Update: 2018-09-10 17:43 GMT

ಚಿಕ್ಕಮಗಳೂರು, ಸೆ.10: ಪೆಟ್ರೋಲ್, ಡಿಸೇಲ್ ಹಾಗೂ ಅಡಿಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಸೋಮವಾರ ಕರೆದಿದ್ದ ಭಾರತ್ ಬಂದ್‍ಗೆ ಕಾಫಿಯನಾಡಿನಲ್ಲಿ ಸಂಪೂರ್ಣ ಜನಬೆಂಬಲ ವ್ಯಕ್ತವಾಗಿದ್ದು, ಬಂದ್ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಸಿಪಿಐ, ಬಿಎಸ್ಪಿ ಪಕ್ಷಗಳೂ ಸೇರಿದಂತೆ ವಿವಿಧ ಕನ್ನಡ, ರೈತ, ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಬಂದ್ ಹಿನ್ನೆಲೆ ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಡಿ.ಎಲ್. ವಿಜಯಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹಳಷ್ಟು ಆಶ್ವಾಸನೇಗಳನ್ನು ಜನತೆಗೆ ನೀಡಿ ಪ್ರಧಾನಿ ಪಟ್ಟ ಏರಿದರು. ತಮ್ಮ ನಾಲ್ಕುವರೆ ವರ್ಷದ ಅವಧಿಯಲ್ಲಿ ಜನತೆಗೆ ನೀಡಿದ ಯಾವ ಆಶ್ವಾಸನೆಯನ್ನೂ ಪ್ರಧಾನಿ ನರೇಂದ್ರ ಮೋದಿ ಅವರು ಈಡೇರಿಸಿಲ್ಲ, ದಿನನಿತ್ಯ ಬಳಕೆ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದ್ದು, ಪೆಟ್ರೋಲ್, ಡಿಸೇಲ್ ಮತ್ತು ಅಡಿಗೆ ಅನಿಲ ಬೆಲೆ ಮೋದಿ ಅಧಿಕಾರ ಅವಧಿಯಲ್ಲಿ 12 ಬಾರಿ ಏರಿಕೆ ಕಂಡಿದೆ. ಇದರಿಂದ ಸಾಮಾನ್ಯ ಜನರ ಜೀವನ ಮೇಲೆ ಪರಿಣಾಮ ಬೀರಿದೆ. ಭಾರತ ದೇಶದಿಂದ 39 ಹೊರ ದೇಶಗಳಿಗೆ ಪೆಟ್ರೋಲ್, ಡಿಸೇಲ್ ಕಡಿಮೆ ಬೆಲೆಗೆ ರಫ್ತು ಮಾಡುತ್ತಿದ್ದು, ಕೇಂದ್ರ ಸರ್ಕಾರ ತಕ್ಷಣ ಪೆಟ್ರೋಲ್, ಡಿಸೇಲ್ ರಫ್ತು ನಿಲ್ಲಿಸಿ ಬೆಲೆ ಏರಿಕೆ ತಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎ ದೇವರಾಜ್ ಮಾತನಾಡಿ, ಪ್ರಧಾನಿ ಮೋದಿ ಅವರ ಅಚ್ಚೇದಿನ್ ಘೋಷಣೆಯಿಂದ ರೈತರು, ದಲಿತರು, ಜನಸಮಾನ್ಯರ ಜೀವನದಲ್ಲಿ ದೊಡ್ಡ ಕಾಂತ್ರಿಯೇ ನಡೆಯಲಿದೆ ಎಂದು ಭಾವಿಸಿದ್ದೆವು. ಆದರೆ ಅವರ ನಾಲ್ಕುವರೆ ವರ್ಷದ ಆಡಳಿತದಲ್ಲಿ ಅಚ್ಛೇದಿನ್ ಬರಲೇ ಇಲ್ಲ ಎಂದು ಛೇಡಿಸಿದ ಅವರು, ಬೆಲೆ ಏರಿಕೆ ಮೂಲಕ ಸಾಮಾನ್ಯ ಜನರ ಜೀವನ ನಾಶ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪ್ರಧಾನಿ ಮೋದಿ ಅವರ ಆಡಳಿತದ ಮೇಲೆ ಜನತೆಗೆ ವಿಶ್ವಾಸವಿಲ್ಲ, ಜಾತ್ಯಾತೀತ ಶಕ್ತಿಗಳು ಒಂದೂಗೂಡಿ ಕರೆದ ಭಾರತ ಬಂದ್‍ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದೇ ಇದಕ್ಕೆ ಸಾಕ್ಷಿ. ಇಂದು ಜಾತ್ಯಾತೀತ ಶಕ್ತಿಗಳು ಒಂದೇ ವೇದಿಕೆ ಬಂದಿವೆ. ಇನ್ನಾದರೂ ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಚೆತ್ತುಕೊಂಡು ದಿನನಿತ್ಯ ಬಳಕೆ ವಸ್ತುಗಳ ಬೆಲೆಏರಿಕೆಯನ್ನು ತಡೆಯಬೇಕೆಂದು ಎಚ್ಚರಿಸಿದರು.   

ಕಾಂಗ್ರೆಸ್ ಮುಖಂಡ ಎಂ.ಎಲ್. ಮೂರ್ತಿ ಮಾತನಾಡಿ, ದಿನನಿತ್ಯ ಬಳಕೆ ವಸ್ತುಗಳ ಬೆಲೆಏರಿಕೆಯಿಂದ ಸಾಮಾನ್ಯ ಜನತೆ ತತ್ತರಿಸಿ ಹೋಗಿದ್ದಾರೆ. ಬೆಲೆಏರಿಕೆ ವಿರೋಧಿಸಿ ಧರಣಿ ನಡೆಸಿದರೆ ಬಿಜೆಪಿಗರು ನಮ್ಮ ಅಭಿವ್ಯಕ್ತಿ ಸ್ವತಂತ್ರವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಹಿಂದೆ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದಂತೆ ಇಂದು ಬೆಲೆಏರಿಕೆಯಿಂದ ನಮ್ಮವರ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆಯನ್ನು ಪ್ರಧಾನಿ ಮೋದಿ ಅವರು ತಂದಿರುವುದು ನಮ್ಮ ದುರ್ದೈವ ಎಂದು ವಿಷಾಧಿಸಿದರು. 

ಬಹುಜನ ಸಮಾಜವಾದಿ ಪಕ್ಷದ ಮುಖಂಡ ಕೆ.ಟಿ. ರಾಧಕೃಷ್ಣ ಮಾತನಾಡಿ, ಭಾರತ ದೇಶ ಇಂದು 10 ವರ್ಷಗಳಷ್ಟು ಹಿಂದೆ ಸರಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದೇ ಅಧಿಕಾರ ತ್ಯಜಿಸಿದರೆ ಭಾರತ ದೇಶ ಸರಿಪಡಿಸಲು ಇನ್ನೂ 10 ವರ್ಷಗಳೇ ಬೇಕು. ದೇಶ ಅಷ್ಟು ಅದೋಗತಿಗೆ ಸರಿದಿದೆ. ದೇಶದಲ್ಲಿ ಇಂದು ತುರ್ತು ಪರಿಸ್ಥಿತಿಯ ವಾತವರಣ ನಿರ್ಮಾಣವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನೆಗೆ ಕಳಿಸುವ ಕೆಲಸ ಮಾಡಬೇಕು ಎಂದರು. 

ಭಾರತೀಯ ಕಮ್ಯೂನಿಸ್ಟ್ ಪಕ್ಷದ ಮುಖಂಡ ರೇಣುಕಾರಾಧ್ಯ ಮಾತನಾಡಿ, ಬೆಲೆ ಏರಿಕೆ ದಿನದಿಂದ ದಿನಕ್ಕೆ ಗಗನಕ್ಕೆ ಮುಟ್ಟುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಾವು ಏನು ಮಾಡಿದರೂ ಜನರು ಒಪ್ಪುತ್ತಾರೆ ಎಂಬ ಮನೋಭಾವ ಹೊಂದಿದ್ದಾರೆ. ಪಾಕಿಸ್ತಾನವನ್ನು ತೋರಿಸಿ ಹಿಂದೂಸ್ಥಾನವನ್ನು ಆಳುವವರು ಎಂದು ಟೀಕಿಸಿದ ಅವರು, ಕೇಂದ್ರ ಸರ್ಕಾರ ಹಿಂದೂಳಿದ ವರ್ಗ, ರೈತರು, ಅಲ್ಪಸಂಖ್ಯಾತರ, ದಲಿತರ ಸುಲಿಗೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ, ಜಿಲ್ಲಾ ಪಂ. ಸದಸ್ಯೆ ಪ್ರೇಮಮಂಜುನಾಥ್, ಕಾಂಗ್ರೆಸ್ ಮುಖಂಡ ಎ.ಎನ್. ಮಹೇಶ್, ಜೆಡಿಎಸ್ ಮುಂಖಡ ಮಂಜಪ್ಪ, ಹೊಲದಗದ್ದೆ ಗಿರೀಶ್, ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ, ರಾಧಸಂದರೇಶ್, ಅಂಜ್ಜದ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ರಾಜೇಗೌಡ, ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಜಿಲ್ಲಾಧ್ಯಕ್ಷ ನೂರುಲ್ಲಾ ಖಾನ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಸೇರಿದಂತೆ ಅನೇಕರು ಇದ್ದರು.

ನಾಲ್ಕುವರೆ ವರ್ಷದಲ್ಲಿ 12 ಬಾರಿ ತೈಲಬೆಲೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಪೆಟ್ರೋಲ್ ಬೆಲೆ 90 ರೂ. ಆಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 84 ರೂ., ಡಿಸೇಲ್ 75 ರೂ. ಆಗಿದೆ. ಇದರಿಂದ ಜನಸಾಮಾನ್ಯರು ಗಂಭೀರ ಪರಿಣಾಮ ಎದರಿಸುವಂತಾಗಿದೆ. ಬಡವರ್ಗದ ವಾಹನ ಮಾಲಕರು, ಚಾಲಕರಿಗೆ ಅನಾನುಕೂಲವಾಗಿದ್ದು, ದರ ಏರಿಕೆಯಿಂದ ಇತರ ಅಗತ್ಯವಸ್ತುಗಳ ಬೆಲೆಯಲ್ಲೂ ಏರಿಕೆ ಕಂಡಿದೆ.
-ಅಮ್ಜದ್, ಸಿಪಿಐ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News