ನ್ಯಾಯಾಧೀಶರ ಭಡ್ತಿಗೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕತ್ತರಿಯಾಗಿದ್ದು ಹೇಗೆ ಗೊತ್ತೇ?

Update: 2018-09-11 04:48 GMT

ಹೊಸದಿಲ್ಲಿ, ಸೆ.11: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ವಿಚಾರಣೆ ನಡೆಸುತ್ತಿರುವ ಸಿಬಿಐ ನ್ಯಾಯಾಧೀಶರನ್ನು ವರ್ಗಾವಣೆ ಮಾಡುವಂತಿಲ್ಲ ಎಂಬ ಸುಪ್ರೀಂಕೋರ್ಟ್ ಆದೇಶ, ತಮ್ಮ ಭಡ್ತಿಗೆ ಕತ್ತರಿ ಹಾಕಿದೆ ಎಂದು ಸೆಷನ್ಸ್ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯ ವಿಚಾರಣೆ ಆರಂಭಿಸಿರುವ ಸುಪ್ರೀಂಕೋರ್ಟ್ ಈ ಸಂಬಂಧ ನೋಟಿಸ್ ಜಾರಿ ಮಾಡಿದೆ. 2017ರ ಎಪ್ರಿಲ್ 19ರಂದು ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಮತ್ತು ಮುರಳಿಮನೋಹರ ಜೋಶಿ ವಿರುದ್ಧದ ಪಿತೂರಿ ಆರೋಪವನ್ನು ಪರಾಮರ್ಶಿಸಿದ ಸುಪ್ರೀಂಕೋರ್ಟ್, ಬಾಕಿ ಪ್ರಕರಣವನ್ನು ರಾಯಬರೇಲಿ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ವರ್ಗಾಯಿಸಿತ್ತು.

"ಈ ಬಗ್ಗೆ ಹೊಸ ವಿಚಾರಣೆ ಇಲ್ಲ. ವಿಚಾರಣೆ ಪೂರ್ಣಗೊಳ್ಳುವವರೆಗೆ ಈ ನ್ಯಾಯಾಧೀಶರನ್ನು ವರ್ಗಾಯಿಸುವಂತಿಲ್ಲ. ನಿರ್ದಿಷ್ಟ ದಿನದಂದು ವಿಚಾರಣೆ ನಡೆಸಲು ಸಾಧ್ಯವೇ ಇಲ್ಲ ಎಂದು ಸೆಷನ್ಸ್ ನ್ಯಾಯಾಲಯ ತೀರ್ಮಾನಿಸುವ ದಿನವನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೆ ವಿಚಾರಣೆಯನ್ನು ಮುಂದೂಡುವಂತಿಲ್ಲ" ಎಂದು ಕೋರ್ಟ್ ಹೇಳಿತ್ತು. ಈ ಆದೇಶದಿಂದ ತಮ್ಮ ಭಡ್ತಿಗೆ ತೊಂದರೆಯಾಗಿದೆ. ಆದ್ದರಿಂದ ಇದನ್ನು ರದ್ದುಪಡಿಸುವ ಮನವಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಯಾದವ್ ಕೋರಿದ್ದರು.

2018ರ ಜೂನ್ 1ರಂದು ಅಲಹಾಬಾದ್ ಹೈಕೋರ್ಟ್, ಯಾದವ್ ಅವರನ್ನು ಬಡೂನ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಭಡ್ತಿ ನೀಡಿ ವರ್ಗಾವಣೆ ಮಾಡಿತ್ತು. ಆದರೆ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಯಾದವ್ ವರ್ಗಾವಣೆಯಾಗುವಂತಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್ ಮೊದಲು ನೀಡಿದ ಆದೇಶವನ್ನು ರದ್ದುಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News