ಐಸಿಸಿ ನ್ಯಾಯಾಧೀಶರನ್ನು ಬಂಧಿಸಿ, ಅವರ ಹೂಡಿಕೆಗಳನ್ನು ಮುಟ್ಟುಗೋಲು ಹಾಕುವುದಾಗಿ ಅಮೆರಿಕದ ಬೆದರಿಕೆ

Update: 2018-09-11 17:16 GMT

ವಾಶಿಂಗ್ಟನ್, ಸೆ. 11: ಅಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸಿದ ಯಾವುದೇ ಅಮೆರಿಕನ್ ವಿರುದ್ಧ ಯುದ್ಧಾಪರಾಧ ಆರೋಪಗಳನ್ನು ಹೊರಿಸಿದರೆ, ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ)ದ ನ್ಯಾಯಾಧೀಶರು ಮತ್ತು ಇತರ ಅಧಿಕಾರಿಗಳನ್ನು ಬಂಧಿಸಲಾಗುವುದು ಹಾಗೂ ಅವರ ವಿರುದ್ಧ ದಿಗ್ಬಂಧನಗಳನ್ನು ವಿಧಿಸಲಾಗುವುದು ಎಂದು ಅಮೆರಿಕ ಸೋಮವಾರ ಬೆದರಿಕೆ ಹಾಕಿದೆ.

ಹೇಗ್‌ನಲ್ಲಿ ನೆಲೆಸಿರುವ ನ್ಯಾಯಾಲಯವು ವಿಶ್ವಾಸಾರ್ಹತೆ ಹೊಂದಿಲ್ಲ ಹಾಗೂ ಅಮೆರಿಕ, ಇಸ್ರೇಲ್ ಮತ್ತು ಅಮೆರಿಕದ ಇತರ ಮಿತ್ರದೇಶಗಳ ಪಾಲಿಗೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಬಣ್ಣಿಸಿದ್ದಾರೆ.

ಅಮೆರಿಕ ಸೇನೆಯ ಸದಸ್ಯರ ವಿರುದ್ಧ ನಡೆಯುವ ಯಾವುದೇ ತನಿಖೆಯು ‘ಆಧಾರರಹಿತ ಹಾಗೂ ಅಸಮರ್ಥನೀಯ’ವಾಗಿದೆ ಎಂದು ಬೋಲ್ಟನ್ ನುಡಿದರು.

‘‘ನಮ್ಮ, ಇಸ್ರೇಲ್ ಮತ್ತು ಅಮೆರಿಕದ ಇತರ ಮಿತ್ರದೇಶಗಳ ಹಿಂದೆ ನ್ಯಾಯಾಲಯ ಬಿದ್ದರೆ, ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ’’ ಎಂದು ಅವರು ಎಚ್ಚರಿಸಿದರು.

ನ್ಯಾಯಾಧೀಶರು, ಪ್ರಾಸಿಕ್ಯೂಟರ್‌ಗಳಿಗೆ ನಿಷೇಧ

ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಅಧಿಕಾರಿಗಳು ಅಮೆರಿಕದ ಯಾವುದೇ ನಾಗರಿಕನ ವಿರುದ್ಧ ಮುಂದುವರಿದರೆ ಅವರ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ಹೊರಿಸಲು ಹಾಗೂ ಹಣಕಾಸು ದಿಗ್ಬಂಧನಗಳನ್ನು ವಿಧಿಸಲು ಅಮೆರಿಕ ಸಿದ್ಧವಾಗಿದೆ ಎಂದು ಅವರು ಹೇಳಿದರು.

‘‘ಅದರ ನ್ಯಾಯಾಧೀಶರು ಮತ್ತು ಪ್ರಾಸಿಕ್ಯೂಟರ್‌ಗಳು ಅಮೆರಿಕ ಪ್ರವೇಶಿಸುವುದನ್ನು ನಾವು ನಿಷೇಧಿಸುತ್ತೇವೆ. ಅಮೆರಿಕದ ಆರ್ಥಿಕ ವ್ಯವಸ್ಥೆಯಲ್ಲಿ ಅವರು ಹೊಂದಿರುವ ಹೂಡಿಕೆಗಳನ್ನು ಸ್ಥಗಿತಗೊಳಿಸುತ್ತೇವೆ ಹಾಗೂ ನಾವು ಅವರನ್ನು ಅಮೆರಿಕ ಕ್ರಿಮಿನಲ್ ವ್ಯವಸ್ಥೆಯಡಿ ಶಿಕ್ಷಿಸುತ್ತೇವೆ’’ ಎಂದರು.

ನಮ್ಮ ಕೆಲಸ ನಾವು ಮಾಡುತ್ತೇವೆ: ಐಸಿಸಿ

 ಅಫ್ಘಾನಿಸ್ತಾನದಲ್ಲಿ ನಡೆದಿದೆಯೆನ್ನಲಾದ ಯುದ್ಧಾಪರಾಧಗಳ ಆರೋಪವನ್ನು ಅಮೆರಿಕದ ಅಧಿಕಾರಿಗಳ ವಿರುದ್ಧ ಹೊರಿಸಿದರೆ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ (ಐಸಿಸಿ)ದ ನ್ಯಾಯಾಧೀಶರು ಮತ್ತು ಅಧಿಕಾರಿಗಳನ್ನು ಬಂಧಿಸುವುದಾಗಿ ಅಮೆರಿಕ ಬೆದರಿಕೆ ಹಾಕಿರುವ ಹೊರತಾಗಿಯೂ, ತನ್ನ ಕೆಲಸ ಯಾವುದೇ ತಡೆಯಿಲ್ಲದೆ ಮುಂದುವರಿಯುತ್ತದೆ ಎಂದು ನ್ಯಾಯಾಲಯ ಮಂಗಳವಾರ ಹೇಳಿದೆ.

  ‘‘ಕಾನೂನಿನ ಆಡಳಿತದ ತತ್ವಗಳು ಮತ್ತು ಕಲ್ಪನೆಗಳಿಗೆ ಅನುಗುಣವಾಗಿ, ಐಸಿಸಿಯು ಕಾನೂನಿನ ನ್ಯಾಯಾಲಯವಾಗಿ ಯಾವುದೇ ತಡೆಯಿಲ್ಲದೆ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ’’ ಎಂದು ನ್ಯಾಯಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.

ತಾನು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ನ್ಯಾಯಾಂಗ ಸಂಸ್ಥೆಯಾಗಿರುವುದಾಗಿ ನ್ಯಾಯಾಲಯ ಘೋಷಿಸಿದೆ.

ಅಪರಾಧಗಳ ವಿಚಾರಣೆಯನ್ನು ಮಾಡಲು ಸರಕಾರಗಳು ವಿಫಲವಾದರೆ ಅಥವಾ ಅವುಗಳಿಗೆ ಅಸಾಧ್ಯವಾದರೆ ಮಾತ್ರ ತಾನು ಅವುಗಳ ವಿಚಾರಣೆ ನಡೆಸುವುದಾಗಿ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News