ಮಂಡ್ಯ: ಚಿನ್ನಾಭರಣ ದೋಚುತ್ತಿದ್ದವನ ಬಂಧನ: 50 ಲಕ್ಷ ರೂ. ಮೌಲ್ಯದ ಸೊತ್ತು ವಶ

Update: 2018-09-11 17:58 GMT

ಮಂಡ್ಯ, ಸೆ.11: ಕಾರಿನಲ್ಲಿ ಡ್ರಾಪ್ ಕೊಡುತ್ತೇನೆಂದು ಮಹಿಳೆಯರಿಂದ ಚಿನ್ನಾಭರಣ ದೋಚುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬೆಳ್ಳೂರು ಪೊಲೀಸರು ಯಶಸ್ವಿಯಾಗಿದ್ದು, ಆತನಿಂದ ಸುಮಾರು 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆಯ ಸೋಮಶೇಖರ್ ಅಲಿಯಾಸ್ ಸೋಮಶೇಖರಚಾರ್ ಅಲಿಯಾಸ್ ಸೂರ್ಯ ಅಲಿಯಾಸ್ ಸೂರಿ ಬಂಧಿತ ಆರೋಪಿ. ಈತನ ವಿಚಾರಣೆಯಿಂದ  23 ಪ್ರಕರಣಗಳು ಬಯಲಾಗಿವೆ ಎಂದು ಎಸ್ಪಿ ಡಿ.ಶಿವಪ್ರಕಾಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿ ಸೋಮಶೇಖರ್ ಹೈವೇಗಳಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಒಂಟಿ ಮಹಿಳೆಯರನ್ನು ಡ್ರಾಪ್ ಕೊಡುವುದಾಗಿ ನಂಬಿಸಿ ಸ್ವಲ್ಪ ದೂರ ಹೋದ ನಂತರ, ಅವರಿಂದ ಚಿನ್ನಾಭರಣ ದೋಚಿ ಕಾರಿನಂದಿ ತಳ್ಳಿ ಪರಾರಿಯಾಗುತ್ತಿದ್ದ. ಈ ಬಗ್ಗೆ ಅನೇಕ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಅವರು ಹೇಳಿದರು.

ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ತುಮಕೂರು ಜಿಲ್ಲೆಯಲ್ಲಿ 12, ಮಂಡ್ಯ ಜಿಲ್ಲೆಯಲ್ಲಿ 6, ರಾಮನಗರ ಜಿಲ್ಲೆಯಲ್ಲಿ 3 ಹಾಗೂ ಹಾಸನ ಜಿಲ್ಲೆಯಲ್ಲಿ 2 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಅವರು ಮಾಹಿತಿ ನೀಡಿದರು.

ಬಂಧಿತ ಆರೋಪಿ ಈ ಹಿಂದೆಯೂ ಕಳ್ಳತನ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ ಬಿಡುಗಡೆಗೊಂಡಿದ್ದ. ಬಿಡುಗಡೆಗೊಂಡ ನಂತರವೂ ಕಳ್ಳತನವನ್ನು ಮಾಡುತ್ತಿದ್ದ. ಈ ಬಗ್ಗೆ ಅನುಮಾನಗೊಂಡು ಬಂಧಿಸಿ ವಿಚಾರಣೆಗೊಳಪಡಿಸಿದಾಗ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News