ಗೌರಿ-ಗಣೇಶ, ಮೊಹರಂ: ಶಾಂತಿ ಸುವ್ಯವಸ್ಥೆ ಕಾಪಾಡಲು ಕೊಡಗು ಜಿಲ್ಲಾಡಳಿತ ಮನವಿ

Update: 2018-09-11 18:27 GMT

ಮಡಿಕೇರಿ, ಸೆ.11: ಸೆಪ್ಟೆಂಬರ್ 12 ಮತ್ತು 13 ರಂದು ಗೌರಿ ಮತ್ತು ಗಣೇಶ ಹಬ್ಬ ಹಾಗೂ 21 ರಂದು ಮೊಹರಂ. ಹೀಗೆ ಸಾಲು ಸಾಲು ಹಬ್ಬಗಳು ಇದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜಿಲ್ಲಾಡಳಿತ ಕೋರಿದೆ.      

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಿಸುವಂತೆ ಅಧಿಕಾರಿಗಳು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಮಾತನಾಡಿ, ಗಣೇಶ ಚತುರ್ಥಿ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಾರ್ವಜನಿಕವಾಗಿ 409 ಕಡೆಗಳಲ್ಲಿ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಸೆ.13 ರಿಂದ ಅ.7 ರ ವರೆಗೂ ಗಣೇಶ ಮೂರ್ತಿ ವಿಸರ್ಜನಾ ಕಾರ್ಯ ನಡೆಯಲಿದ್ದು, ಶಾಂತಿಯುತವಾಗಿ ಹಬ್ಬ ಆಚರಣೆ ಮಾಡುವಂತೆ ತಿಳಿಸಿದರು. ಸೆ.13 ರಂದೇ 156 ಕಡೆಗಳಲ್ಲಿ ಗಣೇಶ ವಿಸರ್ಜನಾ ಕಾರ್ಯ ಜರುಗಲಿದೆ. ಇಂತಹ ಸಮಯದಲ್ಲಿ ಯಾವುದೇ ರೀತಿಯ ಶಾಂತಿ ಸುವ್ಯವಸ್ಥೆಗೆ ಭಂಗ ತರದಂತೆ ಎಚ್ಚರಿಕೆ ವಹಿಸುವುದು ಸಂಬಂಧಪಟ್ಟವರ ಕೆಲಸ ಎಂದು ಅವರು ಹೇಳಿದರು. 

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯಲಾಗುತ್ತದೆ. ಅದೇ ರೀತಿ ವಿದ್ಯುತ್, ಅಗ್ನಿಶಾಮಕ ಇಲಾಖೆಗಳ ಗಮನಕ್ಕೆ ತರಬೇಕು. ಹಾಗೆಯೇ ಪೊಲೀಸ್ ಇಲಾಖೆಯಿಂದ ಎನ್.ಒ.ಸಿ. ಪಡೆಯಬೇಕು ಎಂದು ಎಸ್‍ಪಿ ತಿಳಿಸಿದರು.  

ಮೆರವಣಿಗೆ ಸಂದರ್ಭದಲ್ಲಿ ಸಾರಿಗೆ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ವಾಲೆಂಟರ್ಸ್‍ಗಳನ್ನು ನಿಯೋಜಿಸಿಕೊಳ್ಳಬೇಕು. ಇವರಿಗೆ ಗುರುತಿನ ಚೀಟಿ ನೀಡಬೇಕು. ಸಾಧ್ಯವಿದ್ದಲ್ಲಿ ದೊಡ್ಡ ದೊಡ್ಡ ಪ್ರತಿಷ್ಠಾಪನೆ ಮಾಡುವ ಕಡೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಗಣೇಶ ಮೂರ್ತಿ ವಿಸರ್ಜನೆಗೆ ಸಾಗುವ ಮೆರವಣಿಗೆ ಬಗ್ಗೆ ಪೊಲೀಸ್ ಇಲಾಖೆಗೆ ಮೊದಲೇ ಮಾಹಿತಿ ನೀಡಿರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.  

ಈಗಾಗಲೇ ಪೊಲೀಸ್ ಠಾಣಾ ಹಂತದಲ್ಲಿ ಹಾಗೂ ವಿಭಾಗ ಮಟ್ಟದಲ್ಲಿ ಧಾರ್ಮಿಕ ಮುಖಂಡರೊಂದಿಗೆ ಚರ್ಚಿಸಲಾಗಿದ್ದು, ಎಲ್ಲರೂ ಶಾಂತಿಯುತವಾಗಿ ಹಾಗೂ ಸರಳವಾಗಿ ಆಚರಿಸಲಾಗುವುದು. ಅದರಂತೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಸುಮನ್ ಡಿ.ಪೆನ್ನೇಕರ್ ಅವರು ಮನವಿ ಮಾಡಿದರು. 

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಾತನಾಡಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಎಲ್ಲಾ ಸಮಾಜದವರು, ಎಲ್ಲಾ ಧಾರ್ಮಿಕ ಮುಖಂಡರು, ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಸಹಕಾರ ನೀಡಿದ್ದೀರಿ. ಹಾಗೆಯೇ ಹಬ್ಬ ಹರಿದಿನಗಳಲ್ಲಿಯೂ ಶಾಂತಿ ಸುವ್ಯವಸ್ಥೆಗೆ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಕೋರಿದರು.     

ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸಬೇಕು. ಯಾರೂ ಸಹ ಪ್ಲಾಸ್ಟಿಕ್‍ನ್ನು ಬಳಸುವಂತಿಲ್ಲ. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು. ವಾಲೆಂಟರ್ಸ್‍ಗಳನ್ನು ನಿಯೋಜಿಸಿಕೊಳ್ಳಬೇಕು. ರಕ್ಷಣೆ ಸಂಬಂಧ ಗಮನ ಹರಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ಮಾಡಬೇಡಿ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮನವಿ ಮಾಡಿದರು.  

ಜಿ.ಪಂ.ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅವರು ಮಾತನಾಡಿ ಸ್ವಚ್ಛತೆ ಕಡೆ ಗಮನಹರಿಸಬೇಕು. ಡಸ್ಟ್ ಬಿನ್‍ಗಳನ್ನು ಬಳಸಬೇಕು. ಶುದ್ಧ ಕುಡಿಯುವ ನೀರು ಬಳಸಬೇಕು. ಸ್ವಚ್ಚತೆ ಮತ್ತಿತರ ಸಂಬಂಧ ಗ್ರಾ.ಪಂ.ಪಿಡಿಓಗಳ ಗಮನಕ್ಕೆ ಮೊದಲೇ ತಂದಿರಬೇಕು ಎಂದು ಅವರು ಸಲಹೆ ಮಾಡಿದರು.     

ಹೆಚ್ಚವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಉಪ ಪೊಲೀಸ್ ವರಿಷ್ಠಾಧಿಕಾರಿಗಳಾದ ಸುಂದರ್ ರಾಜ್, ನಾಗಪ್ಪ, ಪುರುಷೋತ್ತಮ, ಧಾರ್ಮಿಕ ಮುಖಂಡರು, ಸಮಾಜದ ಪ್ರತಿನಿಧಿಗಳು ಇತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News