ಭಾರತ ತೊರೆಯುವ ಮೊದಲು ಹಣಕಾಸು ಸಚಿವರನ್ನು ಭೇಟಿಯಾಗಿದ್ದೆ ಎಂದ ವಿಜಯ್ ಮಲ್ಯ

Update: 2018-09-12 14:43 GMT

ಲಂಡನ್, ಸೆ.12: ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ನಾನು ದೇಶ ತೊರೆಯುವುದಕ್ಕೂ ಮುನ್ನ ವಿತ್ತ ಸಚಿವರನ್ನು ಭೇಟಿಯಾಗಿದ್ದೆ. ಬ್ಯಾಂಕ್‌ಗಳ ಜೊತೆಗಿನ ವ್ಯವಹಾರವನ್ನು ಪರಿಹರಿಸುವುದಾಗಿ ನಾನು ಹಲವು ಬಾರಿ ಮನವಿ ಮಾಡಿದೆ. ಆದರೆ ನನ್ನ ಮನವಿಗೆ ಬ್ಯಾಂಕ್‌ಗಳು ಸ್ಪಂದಿಸಲು ನಿರಾಕರಿಸಿದವು ಎಂದು ಭಾರತದ ಬ್ಯಾಂಕ್ ಗಳಿಗೆ ಬಹುಕೋಟಿ ಸಾಲ ಬಾಕಿಯಿರಿಸಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಬುಧವಾರ ತಿಳಿಸಿದ್ದಾರೆ.

ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆದ ತನ್ನ ಗಡಿಪಾರು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಯ ಈ ವಿಷಯ ತಿಳಿಸಿದ್ದಾರೆ.

ವಿಚಾರಣೆಯ ವೇಳೆ ನ್ಯಾಯಾಧೀಶರು, ವಿಜಯ್ ಮಲ್ಯರನ್ನು ಸೆರೆಯಲ್ಲಿಡಲು ಭಾರತೀಯ ಅಧಿಕಾರಿಗಳು ಮುಂಬೈ ಜೈಲಿನಲ್ಲಿ ಸಿದ್ಧಪಡಿಸಿರುವ ಕೊಣೆಯನ್ನು ವೀಡಿಯೊ ಮೂಲಕ ಪರಿಶೀಲಿಸಿದರು.

ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಯ, ಸದ್ಯ ಎಲ್ಲ ರೀತಿಯ ಬ್ಯಾಂಕ್ ವ್ಯವಹಾರಗಳನ್ನು ಬಗೆಹರಿಸುವುದಾಗಿ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇನೆ. ನನ್ನ ಮನವಿಯನ್ನು ನ್ಯಾಯಾಧೀಶರು ಪರಿಗಣಿಸುತ್ತಾರೆ ಎಂದು ಭಾವಿಸುತ್ತೇನೆ. ಎಲ್ಲರಿಗೂ ನ್ಯಾಯ ಸಿಗುತ್ತದೆ ಮತ್ತು ಅದುವೇ ಮುಖ್ಯ ಎಂದು ನಾನು ನಂಬಿದ್ದೇನೆ ಎಂದು ತಿಳಿಸಿದ್ದಾರೆ.

ಮಲ್ಯರನ್ನು ಸೆರೆಯಲ್ಲಿಡಲು ಭಾರತೀಯ ಅಧಿಕಾರಿಗಳು ಆಯ್ಕೆ ಮಾಡಿರುವ ಮುಂಬೈಯ ಆರ್ಥರ್ ರಸ್ತೆಯಲ್ಲಿರುವ ಕಾರಾಗೃಹದ 12ನೇ ಕೋಣೆಯಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಲು ಅದರ ವಿಡಿಯೊವನ್ನು ಕಳುಹಿಸುವಂತೆ ಕಳೆದ ಜುಲೈಯಲ್ಲಿ ವೆಸ್ಟ್‌ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದರು. ಭಾರತ ಸರಕಾರದ ಪರ ಲಂಡನ್‌ನಲ್ಲಿ ವಾದಿಸುತ್ತಿರುವ ಕ್ರೌನ್ ಪ್ರಾಸಿಕ್ಯೂಶನ್ ಸರ್ವಿಸ್ ಈ ಮನವಿಯನ್ನು ಪುರಸ್ಕರಿಸಿತ್ತು ಮತ್ತು ಅಂದಿನಿಂದ ಕಾರಾಗೃಹದ ವಿಡಿಯೊ ಸರಣಿಯನ್ನು ನ್ಯಾಯಾಲಯಕ್ಕೆ ಕಳುಹಿಸಿಕೊಡಲಾಗುತ್ತಿದೆ.

ಮಲ್ಯ ಹೇಳಿಕೆ ಹೊರಬೀಳುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಈ ವಿಷಯವನ್ನು ಇಲ್ಲಿಯವರೆಗೆ ವಿತ್ತ ಸಚಿವರು ಯಾಕೆ ಮರೆಮಾಚಿದ್ದರು ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ. ಮಲ್ಯ ಹೇಳಿಕೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು, ಇದರಿಂದ ಭ್ರಷ್ಟ ಉದ್ಯಮಿಗಳು ಸರಕಾರದ ನೆರವಿನಿಂದಲೇ ದೇಶವನ್ನು ತೊರೆಯುತ್ತಿದ್ದಾರೆ ಎಂಬುವುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News