ಜಗಳೂರು: ಆಕಸ್ಮಿಕ ಬೆಂಕಿ ತಗುಲಿ ಗುಡಿಸಲು ಭಸ್ಮ
Update: 2018-09-12 18:38 IST
ಜಗಳೂರು,ಸೆ.12: ತಾಲೂಕಿನ ಹಿರೇಮಲ್ಲನಹೊಳೆ ಗೊಲ್ಲರಹಟ್ಟಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗಲಿ ಗುಡಿಸಲು ಮನೆ ಭಸ್ಮವಾಗಿದ್ದು ಅಪಾರ ಹಾನಿ ಸಂಭವಿಸಿದೆ.
ಗ್ರಾಮದ ತಿಪ್ಪೇಸ್ವಾಮಿ ಎಂಬವರಿಗೆ ಸೇರಿದ್ದ ಗುಡಿಸಲು ಮನೆಯಾಗಿದ್ದು, ಗಂಡ ಮತ್ತು ಹೆಂಡತಿಯರಿಬ್ಬರು ಕೂಲಿ ಕೆಲಸಕ್ಕೆ ತೆರಳಿದ್ದು, ಸಂಜೆ ವೇಳೆ ಗುಡಿಸಲಿಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಕ್ಕ ಪಕ್ಕದ ಮನೆಯವರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಬರುವುದರೊಳಗೆ ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಗುಡಿಸಲು ಸುಟ್ಟು ಕರಕಲಾಗಿದೆ ಎನ್ನಲಾಗಿದೆ.
ಕೆಲಸದಿಂದ ಮನೆಗೆ ಮರಳಿದ ತಿಪ್ಪೇಸ್ವಾಮಿ ಬೆಂಕಿ ಅವಘಡ ಕಂಡು ಕುಸಿದು ಬಿದ್ದಿದ್ದಾರೆ. ಈ ಘಟನೆಯಿಂದ ಮನೆಯಲ್ಲಿದ್ದ ಆಹಾರ ಸಾಮಾಗ್ರಿಗಳು, 20 ಸಾವಿರ ನಗದು ಹಣ, ಬಂಗಾರದ ವಡವೆಗಳು, ಬಟ್ಟೆ, ಸೇರಿದಂತೆ ಇತರೆ ವಸ್ತುಗಳು ಸುಟ್ಟಿವೆ ಎಂದು ತಿಳಿದುಬಂದಿದೆ.