ಆತ್ಮಹತ್ಯೆ ತಡೆಗೆ ಮಾನಸಿಕ ಸದೃಢತೆಯೇ ಪರಿಹಾರ: ನ್ಯಾ.ಹೊಸಮನಿ ಸಿದ್ದಪ್ಪ

Update: 2018-09-12 14:31 GMT

ಧಾರವಾಡ, ಸೆ.12: ಆತ್ಮಹತ್ಯೆ ಬಹು ದೊಡ್ಡ ಅಪರಾಧ. ಅದು ಶಿಕ್ಷಾರ್ಹ ಅಪರಾಧವೂ ಹೌದು. ಬಾಲಕರು, ವೃದ್ಧರು ಎನ್ನದೇ ಸಾಮಾನ್ಯವಾಗಿ ಕಂಡುಬರುವ ಆತ್ಮಹತ್ಯೆ ಎಂಬ ರೋಗಕ್ಕೆ ಮಾನಸಿಕ ಸದೃಢತೆಯೊಂದೆ ಪರಿಹಾರ ಎಂದು ಪ್ರಭಾರ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಹೊಸಮನಿ ಸಿದ್ದಪ್ಪಹೇಳಿದ್ದಾರೆ.

ಬುಧವಾರ ನಗರದಲ್ಲಿ ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ(ಡಿಮ್ಹಾನ್ಸ್)ಯ ಸಭಾಂಗಣದಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಆರೋಗ್ಯ ಇಲಾಖೆ ಮತ್ತು ವಾರ್ತಾ ಇಲಾಖೆ ಸಹಯೋಗದಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ‘ಆತ್ಮಹತ್ಯೆ ತಡೆಗಟ್ಟಲು ಒಟ್ಟಾಗಿ ಶ್ರಮಿಸೋಣ, ಕಾನೂನು ಅರಿವು’ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜ ಮತ್ತು ಸಂಸಾರದ ಗೊಂದಲ, ಅಪನಂಬಿಕೆ, ಸಂಶಯ, ಖಿನ್ನತೆಗಳ ಕಾರಣದಿಂದ ಆತ್ಮಹತ್ಯೆಗಳು ಸಂಭವಿಸುತ್ತವೆ. ಜೀವನದಲ್ಲಿ ಅಂತಹ ಸಂದರ್ಭಗಳು ಬಂದಾಗ ವ್ಯಕ್ತಿಯು ಸಹನೆ ಮತ್ತು ಹೊಂದಾಣಿಕೆ ಮನೋಭಾವದಿಂದ ವರ್ತಿಸಿ, ಪ್ರಭುದ್ಧತೆಯಿಂದ ಪಾರಾಗಬೇಕು ಎಂದು ಅವರು ಸಲಹೆ ನೀಡಿದರು.

ಮನುಕುಲದ ಜೀವ ಅಮೂಲ್ಯವಾದದ್ದು. ಕೆಟ್ಟ ವಿಚಾರ, ಸಿಟ್ಟಿಗೆ ಒಳಗಾಗಿ ಜೀವ ಕಳೆದುಕೊಂಡರೆ ಮರಳಿ ಬರದು. ಧೈರ್ಯವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ, ಮುನ್ನಡೆಯಬೇಕು. ಸಹಜ ಸಾವು ಬರುವವರೆಗೆ ಎಲ್ಲರೂ ತಾಳ್ಮೆಯಿಂದ ತಮ್ಮ ಕುಟುಂಬ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ಹೊಸಮನಿ ಸಿದ್ದಪ್ಪತಿಳಿಸಿದರು.

ಆತ್ಮಹತ್ಯೆ ಕಾನೂನು ದೃಷ್ಟಿಯಲ್ಲಿ ದಂಡನಾರ್ಹವಾದ ಅಪರಾಧ. ಅದು ಬದುಕಿಗೆ ಹೆದರಿ ಕೈಗೊಳ್ಳುವ ಹೀನ ಕೃತ್ಯ. ಅದಕ್ಕೆ ಸ್ವಲ್ಪಮಟ್ಟಿನ ಮರುಕವಿದ್ದರೂ ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ಇತರರಲ್ಲಿ ಕೀಳರಿಮೆ ಮೂಡುತ್ತದೆ. ಆದುದರಿಂದ, ಅದನ್ನು ಗೆದ್ದು ಬಾಳುವ ಆತ್ಮಸ್ಥೈರ್ಯ ಎಲ್ಲರಲ್ಲೂ ಬರಬೇಕು. ದೇಶದ ಶ್ರೀಮಂತ ಪರಂಪರೆ, ಸಂಸ್ಕೃತಿ, ಐಕ್ಯತೆ ಭದ್ರತೆ ಮತ್ತು ಅಭಿವೃದ್ಧಿಗೆ ಪೂರಕವಾಗಿ ನಾವು ಬದುಕೋಣ ಮತ್ತು ಇತರರು ಬದುಕುವಂತೆ ಪ್ರೇರೇಪಿಸೋಣ ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣಾಧಿಕಾರಿ ಡಾ. ಆರ್.ಎಂ.ದೊಡ್ಡಮನಿ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಆರ್.ಯು.ಬೆಳ್ಳಕ್ಕಿ, ಡಿಮ್ಹಾನ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ.ಶ್ರೀನಿವಾಸ ಕೊಸಗಿ, ಧಾರವಾಡ ಕೇಂದ್ರ ಕಾರಾಗೃಹದ ಅಧೀಕ್ಷಕಿ ಡಾ.ಆರ್.ಅನಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News