ಮೈಸೂರು: ಹಿಂದೂ-ಮುಸ್ಲಿಂ ಯುವಕರಿಂದ ಗಣೇಶ ಹಬ್ಬ ಆಚರಣೆ

Update: 2018-09-12 15:24 GMT

ಮೈಸೂರು,ಸೆ.12: ನಾಡಿನೆಲ್ಲೆಡೆ ಗಣೇಶ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದ್ದು, ಮೈಸೂರಿನ ಪರಿವರ್ತನ ಟ್ರಸ್ಟ್ ವತಿಯಿಂದ ವಿನೂತನವಾಗಿ ಹಬ್ಬ ಆಚರಿಸಲಾಗಿದೆ. ಹಿಂದೂ ಮುಸ್ಲಿಂ ಯುವಕರು ಒಂದಾಗಿ ಗಣೇಶನ ಹಬ್ಬವನ್ನು ಆಚರಿಸಿದ್ದಾರೆ.

ಅಗ್ರಹಾರದ ವೃತ್ತದಲ್ಲಿರುವ ಕಚೇರಿಯಲ್ಲಿ ಬುಧವಾರ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ. ಪರಸ್ಪರ ಗಣೇಶ ಹಾಗೂ ಮೊಹರಂ ಶುಭಾಶಯಗಳನ್ನ ವಿನಿಮಯ ಮಾಡಿಕೊಂಡು ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂಬ ಸಂದೇಶ ರವಾನಿಸಿದ್ದಾರೆ. ಗಣೇಶನ ಹಬ್ಬ ಒಟ್ಟಿಗೆ ಆಚರಿಸುವ ಮೂಲಕ ನಾವೆಲ್ಲಾ ಒಂದೇ ಎಂದು ನಿರೂಪಿಸಿದ್ದಾರೆ.

ಈ ಸಂದರ್ಭ ಇಳೈ ಆಳ್ವಾರ್ ಸ್ವಾಮೀಜಿ ಮಾತನಾಡಿ, ಭಾರತ ದೇಶದಲ್ಲಿ ವರ್ಷದಲ್ಲಿ ಹಲವಾರು ಹಬ್ಬಗಳನ್ನು ಆಚರಣೆ ಮಾಡುವುದು ಹಿಂದೂ ಮತ್ತು ಇಸ್ಲಾಂ ಧರ್ಮದ ಸಂಪ್ರದಾಯವಾಗಿದೆ. ಮೇಲಾಗಿ ಈ ಬಾರಿ ಗೌರಿ ಗಣೇಶ ಮತ್ತು ಮೊಹರಂ ಒಟ್ಟಾಗಿ ಬಂದಿದ್ದರಿಂದ ಉಭಯ ಸಮಾಜದ ಬಾಂಧವರು  ಈ ಹಬ್ಬಗಳನ್ನು ಬಹಳ ಶಾಂತಿಯುತವಾಗಿ ಆಚರಣೆ ಮಾಡಿ ಸೌಹಾರ್ದತೆಯಿಂದ ಬಾಳಬೇಕಾಗಿದೆ. ಈ ನಾಡಿನ ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ದವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಆದರೆ ಕೆಲವು ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿಯನ್ನು ಕದಡುವ ಉದ್ದೇಶದಿಂದ ಏನಾದರೂ ಸುಳ್ಳು ಸುದ್ದಿ ಹರಡಿಸಿ ಅಹಿತಕರ ಘಟನೆಗಳು ನಡೆಯುವ ಹಾಗೆ ಮಾಡುತ್ತಾರೆ. ಅದ್ದರಿಂದ ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು ಎಂದರು.

ಶ್ರೀಕರ ಪರಮಪೂಜ್ಯ ಸ್ವಾಮೀಜಿ, ಪರಿವರ್ತನ ಟ್ರಸ್ಟ್ ಅಧ್ಯಕ್ಷ ವಿನಯ್ ಕಣಗಾಲ್, ಹಿರಿಯ ಕಲಾವಿದ ಮೈಕ್ ಚಂದ್ರು, ಅದಿತ್ರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸೌಭಾಗ್ಯ, ಕಾರ್ಯದರ್ಶಿ ಅಮ್ರಿನ್ ತಾಜ್, ಅರವಿಂದ್, ದಿಲೀಪ್, ರಂಜಿತ್ ಪ್ರಸಾದ್, ಖುಸ್ರು, ಅಬ್ರಾರ್, ನಾಸೀರ್ ಬಾಷಾ, ಜಮೀರ್ ಪಾಷಾ, ಅನ್ಸರ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News