ಶಿವಮೊಗ್ಗ ಮೂಲದ ಗುವಾಹಟಿ ಐಐಟಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

Update: 2018-09-12 15:43 GMT

ಶಿವಮೊಗ್ಗ, ಸೆ. 12: ಅಸ್ಸಾಂ ರಾಜ್ಯದ ರಾಜಧಾನಿ ಗುವಾಹಟಿಯ ಪ್ರತಿಷ್ಠಿತ ಇಂಡಿಯನ್ ಇನ್ಸ್‍ಟ್ಯೂಟ್ ಆಫ್ ಟೆಕ್ನಾಲಜಿ (ಐ.ಐ.ಟಿ.) ಯಲ್ಲಿ ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿನಿಯೋರ್ವಳು, ಕಾಲೇಜು ಹಾಸ್ಟೆಲ್‍ನಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. 

ಜಿಲ್ಲೆಯ ಹೊಸನಗರ ತಾಲೂಕಿನ ಎಸ್.ಸಿ.ನಾಗಶ್ರೀ (18) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿ ಡೆತ್‍ನೋಟ್ ಬರೆದಿದ್ದು, ಹಾಸ್ಟೆಲ್‍ನ ಕೊಠಡಿಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ ಎಂದು ಗುವಾಹಟಿಯ ಅಮೀನ್‍ ಗೌನ್ ಔಟ್ ಪೋಸ್ಟ್ ಪೊಲೀಸರು ಅಲ್ಲಿನ ಸುದ್ದಿಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ. 

ಆಸಕ್ತಿಯಿಲ್ಲ: ಎಸ್.ಸಿ.ನಾಗಶ್ರೀಯವರು ಶಿಕ್ಷಕಿಯಾಗುವ ಹಂಬಲ ಹೊಂದಿದ್ದರು. ಆದರೆ ಕುಟುಂಬದವರ ಇಚ್ಚೆಯಂತೆ ಇಂಜಿನಿಯರಿಂಗ್ ಪದವಿಗೆ ಸೇರ್ಪಡೆಯಾಗಿದ್ದರು. ಇದರಿಂದ ಅವರು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು. 'ತಂದೆ ತಾಯಿ, ಕುಟುಂಬ ಸದಸ್ಯರ ಇಚ್ಚೆಯಂತೆ ನಡೆದುಕೊಳ್ಳಲು ತನ್ನಿಂದ ಆಗುತ್ತಿಲ್ಲ. ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ' ಆಕೆ ಡೆತ್‍ನೋಟ್‍ನಲ್ಲಿ ಬರೆದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. 

ಕ್ಲಾಸ್‍ಗೆ ತೆರಳಿರಲಿಲ್ಲ: ಬುಧವಾರ ಬೆಳಗ್ಗೆ ಕ್ಲಾಸ್‍ಗೆ ಎಸ್.ಸಿ.ನಾಗಶ್ರೀ ತೆರಳಿರಲಿಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ಕ್ಲಾಸ್‍ಗೆ ಬರುವುದಿಲ್ಲವೆಂದು ಸಹಪಾಠಿ ಗೆಳತಿಗೆ ಹೇಳಿದ್ದಳು. ಗೆಳತಿಯು ತರಗತಿ ಪೂರ್ಣಗೊಳಿಸಿ ಬೆಳಿಗ್ಗೆ 10.30 ರ ಸುಮಾರಿಗೆ ಕೊಠಡಿಗೆ ಹಿಂದಿರುಗಿದ್ದು, ಎಸ್.ಸಿ.ನಾಗಶ್ರೀ ಕೊಠಡಿಯ ಬಾಗಿಲು ತೆರೆದಿಲ್ಲ. ಈ ಕುರಿತಂತೆ ಸೆಕ್ಯೂರಿಟಿ ಗಾರ್ಡ್‍ಗೆ ಮಾಹಿತಿ ನೀಡಿದ್ದಾಳೆ. 

ಕಿಟಕಿಯ ಮೂಲಕ ಪರಿಶೀಲಿಸಿದಾಗ ಸಿ.ಎಸ್.ನಾಗಶ್ರೀ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಕಾಲೇಜು ಆಡಳಿತ ಮಂಡಳಿಯು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಕೊಠಡಿಯ ಬಾಗಿಲು ಮುರಿದು ಒಳ ಪ್ರವೇಶಿಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News