ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ: ಸಚಿವ ಎನ್.ಮಹೇಶ್

Update: 2018-09-12 15:48 GMT

ದಾವಣಗೆರೆ,ಸೆ.12: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದರು.

ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಬೆಳಗಾವಿ ಜಿಲ್ಲೆಯ ರಾಜಕೀಯ ಬೆಳವಣಿಗೆಯಿಂದ ಏನೂ ಆಗುವುದಿಲ್ಲ. ಅದು ಕಾಂಗ್ರೆಸ್ ಪಕ್ಷದಲ್ಲಿರುವ ಗೊಂದಲ. ಅದನ್ನು ಕಾಂಗ್ರೆಸ್ಸಿನ ಮುಖಂಡರು, ಆ ಪಕ್ಷದ ಹೈಕಮಾಂಡ್ ಸರಿಪಡಿಸುತ್ತಾರೆ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯೂ ಆಗುವುದಿಲ್ಲ ಎಂದು ಅವರು ಹೇಳಿದರು.  

ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜೆಡಿಎಸ್ ಶಾಸಕರನ್ನು ಯಾವ ಕಾರಣಕ್ಕೂ ಬಿಜೆಪಿಯವರಿಗೆ ತೆಗೆಯಲು ಆಗುವುದಿಲ್ಲ. ಜೆಡಿಎಸ್ ಶಾಸಕರನ್ನು ಬಿಜೆಪಿಯವರು ಸೆಳೆಯಲು ಪ್ರಯತ್ನಿಸಿದರೆ ಅದೊಂದು ವ್ಯರ್ಥ ಪ್ರಯತ್ನವಾಗುತ್ತದಷ್ಟೇ. ಈ ಜಿಲ್ಲೆಗಳ ಜೆಡಿಎಸ್ ಶಾಸಕರು ಯಾವುದೇ ಆಮಿಷಕ್ಕೂ ಒಳಗಾಗುವುದಿಲ್ಲ, ಪಕ್ಷ ತೊರೆಯುವವರೂ ಅಲ್ಲ ಎಂದು ಅವರು ಆಪರೇಷನ್ ಕಮಲದ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. 

ನಾನು ಬಿಎಸ್ಪಿ ಶಾಸಕನಾಗಿದ್ದು, ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ಸಂಪರ್ಕ ಮಾಡುವುದಕ್ಕೆ ಆಗುವುದೂ ಇಲ್ಲ. ಬೆಳಗಾವಿ ವಿಚಾರ ಮುಂದಿಟ್ಟುಕೊಂಡು ಬಿಜೆಪಿಯವರು ಆಪರೇಷನ್ ಮಾಡಲು ಹೊರಟಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ಸಿನಲ್ಲಾದ ಸಮಸ್ಯೆಯನ್ನು ಆ ಪಕ್ಷದ ಮುಖಂಡರು, ಹೈಕಮಾಂಡ್ ಸರಿಪಡಿಸುತ್ತದೆಂಬ ನಂಬಿಕೆ ಇದೆ. ಸಮ್ಮಿಶ್ರ ಸರ್ಕಾರಕ್ಕೂ ಯಾವುದೇ ತೊಂದರೆಯಾಗದು ಎಂದು ಅವರು ಪುನರುಚ್ಛರಿಸಿದರು. 

ರಾಜ್ಯದ ಸರ್ಕಾರಿ ಶಾಲೆಗಳ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಬೇಕಾದ ಅವಶ್ಯಕತೆ ಇದೆ. ಸದ್ಯಕ್ಕೆ ಆರ್ಥಿಕ ಮುಗ್ಗಟ್ಟು ಇದ್ದು, ಸರ್ಕಾರ ರೈತರ ಸಾಲ ಮನ್ನಾ ಮಾಡಿರುವ ಹಿನ್ನೆಲೆಯಲ್ಲಿ ಶಾಲೆಗಳ ಅಭಿವೃದ್ಧಿಗೆ ಒಂದಿಷ್ಟು ಕಾಲಾವಕಾಶವೂ ಬೇಕಾಗುತ್ತದೆ ಎಂದು ಶಿಕ್ಷಣ ಸಚಿವ ಮಹೇಶ್ ಸರ್ಕಾರಿ ಶಾಲೆಗಳ ಕುರಿತಂತೆ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News