ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಲಘು ವಾಹನ ಸಂಚಾರಕ್ಕೆ ಮುಕ್ತ

Update: 2018-09-12 16:46 GMT
ಸಾಂದರ್ಭಿಕ ಚಿತ್ರ

ಮಡಿಕೇರಿ,ಸೆ.12: ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ದುರಸ್ಥಿಗೊಳಿಸುವ ಕಾರ್ಯ ಭರದಿಂದ ಸಾಗಿದ್ದು, ಇದೀಗ 4 ಚಕ್ರದ ಲಘು ವಾಹನಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ 275 ಯನ್ನು ಮುಕ್ತಗೊಳಿಸಲಾಗಿದೆ. ಕಳೆದ 1 ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಗುಡ್ಡ ಕುಸಿದು ಹೆದ್ದಾರಿಯನ್ನು ಸಂಪೂರ್ಣ ಬಲಿ ಪಡೆದಿತ್ತು. ನಂತರ ಮಡಿಕೇರಿ- ಮಂಗಳೂರು ಹೆದ್ದಾರಿ ಸಂಪರ್ಕ ಬಂದ್ ಆದ ಸ್ಥಿತಿಯಲ್ಲಿತ್ತು.

ಈ ನಡುವೆಯೇ ಕಳೆದ 1 ತಿಂಗಳಿಂದ ಹಗಲಿರುಳು, ಹೆದ್ದಾರಿಗೆ ಬಿದ್ದ ಗುಡ್ಡದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಸಲಾಗಿತ್ತು. ಆ ಬಳಿಕ ಬಾರ್ಡರ್ ರೋಡ್ ಆರ್ಗನೈಸೇಷನ್ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ಸಲಹೆ ಪಡೆದು ಹೆದ್ದಾರಿಯನ್ನು ತಾತ್ಕಾಲಿಕವಾಗಿ ದುರಸ್ಥಿ ಪಡಿಸುವ ಕಾರ್ಯಕ್ಕೆ ಮುಂದಾಯಿತು. ಕುಸಿದು ಹೋದ ಹೆದ್ದಾರಿಯ ಪಕ್ಕದಲ್ಲೇ ಪಯಸ್ವಿನಿ ನದಿ ಹರಿಯುತ್ತಿರುವುದರಿಂದ ಎಂ.ಸ್ಯಾಂಡ್ ಮೂಟೆಗಳನ್ನು ಜೋಡಿಸಿ ತಡೆಗೋಡೆ ನಿರ್ಮಿಸಲಾಯಿತು. ಬಿಆರ್‍ಓ ತಂತ್ರಜ್ಞರ ಸಲಹೆಯಂತೆ ‘ಮ್ಯಾಟ್ ಗ್ರಿಪ್ಟರ್’ ಮತ್ತು ‘ಜಿಯೋ ನೆಟ್’ ಅಳವಡಿಸಿ ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯನ್ನು ತಾತ್ಕಾಲಿಕವಾಗಿ ದುರಸ್ಥಿ ಮಾಡಲಾಗಿದೆ.

ಜಲನೀರು ಸರಾಗವಾಗಿ ಹರಿದು ಹೋಗಲು ಸ್ಯಾಂಡ್ ಬಂಡ್‍ಗಳ ನಡುವೆ ಪೈಪುಗಳನ್ನು ಕೂಡ ಅಳವಡಿಸಲಾಗಿದ್ದು, ಮಳೆ ಸುರಿದರೂ ಕೂಡ ರಸ್ತೆಗೆ ಯಾವುದೇ ಹಾನಿಯಾಗದಂತೆ ಕಾಮಗಾರಿ ನಡೆಸಲಾಗಿದೆ. ಇದೀಗ ರಸ್ತೆಯ ಮೇಲ್ಬಾಗಕ್ಕೆ ‘ಕಾಂಕ್ರಿಟ್ ಗ್ರೋಟ್’ ಹಾಕುವ ಮೂಲಕ ಹೆದ್ದಾರಿಯನ್ನು ಬಲಪಡಿಸಲಾಗುತ್ತಿದ್ದು, ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೆದ್ದಾರಿ ಕಾಮಗಾರಿಗಾಗಿ ರಸ್ತೆ ಬದಿಯಲ್ಲಿ ಎಂ.ಸ್ಯಾಂಡ್, ಜೆಲ್ಲಿ, ಕಲ್ಲುಗಳನ್ನು ಸುರಿದಿರುವುದರಿಂದ ಲಾರಿ ಮತ್ತು ಪ್ರಯಾಣಿಕರ ಬಸ್‍ಗಳ ಸಂಚಾರಕ್ಕೆ ತಡೆಯಾಗುತ್ತಿದ್ದು, ಮಿನಿಬಸ್ ಸಂಚಾರ ವ್ಯವಸ್ಥೆ ರೂಪಿಸುವ ಕುರಿತು ಚಿಂತಿಸಲಾಗುತ್ತಿದೆ. 

ಒಟ್ಟಿನಲ್ಲಿ ಕಳೆದ 1 ತಿಂಗಳಿಂದ ಸಂಪರ್ಕ ಕಡಿತಗೊಂಡಿದ್ದ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಘು ವಾಹನಗಳು ಸಂಚರಿಸಬಹುದಾಗಿದ್ದು, ಪ್ರಯಾಣಿಕರಿಗೆ ತುಸು ನಿರಾಳತೆ ಲಭಿಸಿದಂತಾಗಿದೆ. ಮುಂದಿನ ಒಂದು ತಿಂಗಳ ಒಳಗಾಗಿ ಹೆದ್ದಾರಿಯನ್ನು ಸಂಪೂರ್ಣವಗಿ ದುರಸ್ತಿಪಡಿಸಿ ಶಾಶ್ವತವಾಗಿ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ವಿಭಾಗ ಇಂಜಿನಿಯರ್ ನಾಗರಾಜ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News