ಪರಿಹಾರ ಕಾರ್ಯ ಚುರುಕುಗೊಳಿಸಲು ರಾಜ್ಯ ಸರಕಾರಕ್ಕೆ ಕೊಡಗು ಬಿಜೆಪಿ ಆಗ್ರಹ

Update: 2018-09-12 17:11 GMT

ಮಡಿಕೇರಿ, ಸೆ.12: ಕೊಡಗಿನಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಚುರುಕುಗೊಳಿಸಬೇಕೆಂದು ಒತ್ತಾಯಿಸಿರುವ ಕೊಡಗು ಜಿಲ್ಲಾ ಬಿಜೆಪಿ, ಕೇಂದ್ರದ ವಿಪತ್ತು ಅಧ್ಯಯನ ತಂಡ ಸಲ್ಲಿಸುವ ವರದಿಯ ಆಧಾರದಲ್ಲಿ ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ವಸತಿ, ಕೃಷಿ ಭೂಮಿ, ನಿವೇಶನ, ಶಿಕ್ಷಣ ಮತ್ತು ಉದ್ಯೋಗಕ್ಕೆ ಸರ್ಕಾರ ಆದ್ಯತೆ ನೀಡಬೇಕು ಎಂದರು. ರಾಜ್ಯ ಸರ್ಕಾರ ಪರಿಹಾರ ಕಾರ್ಯಗಳನ್ನು ಮತ್ತಷ್ಟು ವೇಗವಾಗಿ ಕೈಗೊಳ್ಳಬೇಕೆಂದ ಅವರು, ಕಾಟಾಚಾರಕ್ಕೆ ಪರಿಹಾರವನ್ನು ನೀಡಬಾರದೆಂದರು. ಪ್ರತಿಯೊಂದು ಹಂತವನ್ನು ಅಧ್ಯಯನ ನಡೆಸಿ ಅಗತ್ಯ ನೆರವು ನೀಡಬೇಕು. ಈಗಾಗಲೆ ಜಿಲ್ಲೆಯ ಶಾಸಕರು ಹಾಗೂ ಸಂಸದರು ಕೇಂದ್ರ ಸಚಿವರ ಮೂಲಕ ಪ್ರಧಾನಮಂತ್ರಿಗಳ ಗಮನ ಸೆಳೆದಿದ್ದು, ಕೇಂದ್ರದ ಅಧ್ಯಯನ ತಂಡ ಜಿಲ್ಲೆಗೆ ಆಗಮಿಸಿದೆ. ಈ ತಂಡ ನೀಡುವ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದರು.

ಜಿಲ್ಲೆಯ ಶಾಸಕರುಗಳು ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಜೀವದ ಹಂಗು ತೊರೆದು ಸಂತ್ರಸ್ತರನ್ನು ರಕ್ಷಿಸಿದ್ದಾರೆ. ಪರಿಹಾರ ಮಾರ್ಗಗಳಿಗಾಗಿ ಹಗಲಿರುಳೆನ್ನದೆ, ದುಡಿಯುತ್ತಿದ್ದಾರೆ. ಅತಿವೃಷ್ಟಿ ಹಾನಿಯ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದೆಂದು ತಿಳಿಸಿದ ಭಾರತೀಶ್, ಕಾಂಗ್ರೆಸ್‍ನ ಕೆಲವು ಮುಖಂಡರು ನೀಡುತ್ತಿರುವ ಹೇಳಿಕೆ ಸರಿ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನ ಕಾರ್ಯದರ್ಶಿ ರವಿ ಕುಶಾಲಪ್ಪ ಮಾತನಾಡಿ, ಕಾಫಿ ಮಂಡಳಿ ಈಗಾಗಲೆ ಬೆಳೆ ನಷ್ಟದ ಬಗ್ಗೆ ಸರ್ವೇ ಕಾರ್ಯ ನಡೆಸಿದ್ದು, ಸೂಕ್ತ ಪರಿಹಾರ ದೊರೆಯುವ ವಿಶ್ವಾಸವಿದೆ ಎಂದರು. ಸರ್ಕಾರ ನೀಡುವ ಪರಿಹಾರ ಜಿಲ್ಲೆಯ ಪ್ರತಿಯೊಂದು ಮಳೆ ಹಾನಿ ಪ್ರದೇಶಗಳಿಗೆ ಅನ್ವಯವಾಗಬೇಕು. ವಿಶೇಷ ಅನುದಾನದ ಮೂಲಕವೆ ಪರಿಹಾರ ಹಂಚಿಕೆಯಾಗಬೇಕೆಂದ ಅವರು, ಸರ್ವನಾಶಗೊಂಡಿರುವ ಗದ್ದೆಗಳ ಮರು ನಿರ್ಮಾಣಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದರು. ಸಂತ್ರಸ್ತರಿಗೆ ಸೂಕ್ತ ಜಾಗವನ್ನು ಗುರುತಿಸಿ ಭೂ ಮಾಲಕತ್ವವನ್ನು ನೀಡಿ, ಕೃಷಿಗೆ ಮರು ಸಾಲ ನೀಡಬೇಕು ಮತ್ತು ಸಂತ್ರಸ್ತ ಕುಟುಂಬಗಳ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕವನ್ನು ಸರ್ಕಾರವೆ ಭರಿಸಬೇಕೆಂದು ರವಿ ಕುಶಾಲಪ್ಪ ಒತ್ತಾಯಿಸಿದರು.

ಎಪಿಎಲ್ ಮತ್ತು ಬಿಪಿಎಲ್ ಎಂದು ವಿಂಗಡಿಸದೆ ಎಲ್ಲರಿಗೆ ಏಕ ಮಾನದಂಡದಡಿ ಪರಿಹಾರವನ್ನು ವಿತರಿಸಬೇಕೆಂದ ಅವರು, ಕೆಲವು ಪರಿಸರವಾದಿಗಳು ಗ್ರಾಮಸ್ಥರನ್ನು ಗ್ರಾಮದಿಂದ ಖಾಲಿ ಮಾಡಿಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು. ಪರಿಸರವಾದಿಗಳೆ ತಮ್ಮ ಭೂಮಿಯನ್ನು ಸಂತ್ರಸ್ತರಿಗೆ ದಾನ ಮಾಡಲಿ, ವಿನಾಕಾರಣ ತೊಂದರೆ ನೀಡಿದರೆ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ವಕ್ತಾರ ನಾಪಂಡ ರವಿಕಾಳಪ್ಪ ಮಾತನಾಡಿ, ಕೊಡಗು ಜಿಲ್ಲೆಯನ್ನು ಪ್ರಕೃತಿ ವಿಕೋಪ ಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಬೇಕು, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೂರಾರು ಕೋಟಿ ನೆರವು ಹರಿದು ಬಂದಿದ್ದು, ಅದನ್ನು ಬೇರೆಡೆಗೆ ಹಂಚಿಕೆ ಮಾಡದೆ ಕೊಡಗು ಜಿಲ್ಲೆಗೆ ಮೀಸಲಿಡಬೇಕೆಂದು ಒತ್ತಾಯಿಸಿದರು. ಸೂಕ್ತ ಭೂಮಿ ಮತ್ತು ಪರಿಹಾರ ಧನವನ್ನು ನೀಡಬೇಕೆಂದ ಅವರು, ಗೋವುಗಳ ರಕ್ಷಣೆಗೆ ಗೋಶಾಲೆ ತೆರೆಯಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ಮನೆಯಪಂಡ ಕಾಂತಿ ಸತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿ.ಕೆ.ಲೋಕೇಶ್ ಹಾಗೂ ರಾಬಿನ್ ದೇವಯ್ಯ ಉಪಸ್ಥಿತರಿದ್ದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತಿಭಟನೆ ಹಾಸ್ಯಾಸ್ಪದ
ಕೇಂದ್ರ ಸಕಾರದ ವಿರುದ್ಧ ಇತ್ತೀಚೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ನಡೆಸಿದ ಪ್ರತಿಭಟನೆಯನ್ನು ಖಂಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ವಾಸ್ತವಾಂಶ ತಿಳಿಯದೆ ಈ ಎರಡು ಪಕ್ಷಗಳು ಪ್ರತಿಭಟನೆ ನಡೆಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಳುಗುವ ದೋಣಿಯಾಗಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರ ಹಾದಿ ತಪ್ಪಿಸುವ ಕಾರ್ಯ ಮಾಡುತ್ತಿದೆ. ದೇಶದ ಬಗ್ಗೆ ಕಾಳಜಿ ಮತ್ತು ಮುಂದಾಲೋಚನೆ ಇಲ್ಲದೆ ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೆ ಆಡಳಿತ ನಡೆಸಿದ ಕಾಂಗ್ರೆಸ್ ತಾತ್ಕಾಲಿಕ ನಿರ್ಧಾರಗಳ ಮೂಲಕ ‘ಕ್ವಿಕ್ ಫಿಕ್ಸ್’ ಸರ್ಕಾರವಾಗಿತ್ತಷ್ಟೆ ಎಂದು ಟೀಕಿಸಿದರು.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಳವಾಗುತ್ತಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲದಂತೆ ನಾಟಕವಾಡುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಡೆ ಹಾಸ್ಯಾಸ್ಪದವಾಗಿದೆ. ರಾಜ್ಯದಿಂದ ಕೇಂದ್ರಕ್ಕೆ ತೈಲೋತ್ಪನ್ನಗಳಿಂದ ಕೇವಲ 6.66 ರೂ. ಸೆಸ್ ಪಾವತಿಯಾಗುತ್ತದೆ. ಆದರೆ, ರಾಜ್ಯ ಸರ್ಕಾರ 24.98 ರೂ. ಸೆಸ್‍ನ್ನು ತನ್ನ ಬಳಿಯೇ ಇಟ್ಟುಕೊಳ್ಳುತ್ತದೆ. ಅಷ್ಟೊಂದು ಜನಪರ ಕಾಳಜಿ ಇದ್ದರೆ ತೈಲೋತ್ಪನ್ನಗಳ ಮೇಲೆ ಸೆಸ್ ಸಂಗ್ರಹಿಸುವುದನ್ನು ಕೈಬಿಡಲಿ ಎಂದು ಭಾರತೀಶ್ ತಿಳಿಸಿದರು.

ಹಿಂದೆ ಯುಪಿಎ ಸರ್ಕಾರವಿದ್ದಾಗ ದುಬಾರಿಯಾಗಿದ್ದ ಅಗತ್ಯ ವಸ್ತುಗಳ ಬೆಲೆ ಈಗಿನ ಎನ್‍ಡಿಎ ಅವಧಿಯಲ್ಲಿ ಸಂಪೂರ್ಣವಾಗಿ ಕಡಿಮೆಯಾಗಿದೆ. ಆದರೆ, ಕೇವಲ ಪೆಟ್ರೋಲ್ ಮತ್ತು ಡೀಸೆಲ್ ನೆಪ ಮಾಡಿಕೊಂಡು ಕೇಂದ್ರವನ್ನು ಟೀಕಿಸುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಯುಪಿಎ ಹಾಗೂ ಎನ್‍ಡಿಎ ಸರ್ಕಾರಗಳ ಅವಧಿಯಲ್ಲಿನ ದರ ವ್ಯತ್ಯಾಸಗಳ ಕುರಿತು ಭಾರತೀಶ್ ಇದೇ ಸಂದರ್ಭ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News