ಮಂಡ್ಯ: ಮೆಣಸಗೆರೆ ಸರಕಾರಿ ಶಾಲೆಗೆ ಪ್ರಕಾಶ್ ರೈ ಭೇಟಿ; ಶಾಲಾಭಿವೃದ್ಧಿಗೆ ನೆರವಾಗುವ ಭರವಸೆ

Update: 2018-09-12 17:37 GMT

ಮಂಡ್ಯ, ಸೆ.12: ಮದ್ದೂರು ತಾಲೂಕಿನ ಮೆಣಸಗೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ತಮ್ಮ ಗುರಿ ಎಂದು ನಟ ಪ್ರಕಾಶ್ ರೈ ಭರವಸೆ ನೀಡಿದ್ದಾರೆ.

ಬುಧವಾರ ಶಾಲೆಗೆ ಭೇಟಿ ನೀಡಿ ಶಾಲಾಭಿವೃದ್ಧಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮಸ್ಥರ ಸಹಕಾರ ಮತ್ತು ದಾನಿಗಳ ನೆರವಿನೊಂದಿಗೆ ಮುಂದಿನ ದಿನಗಳಲ್ಲಿ ಆಟದ ಮೈದಾನ ಅಭಿವೃದ್ಧಿ, ರಂಗಮಂದಿರ ಹಾಗೂ ಹೈಟೆಕ್ ಶೌಚಾಲಯ ನಿರ್ಮಿಸುವುದಾಗಿ ಹೇಳಿದರು.
ಈ ಶಾಲೆಯಲ್ಲಿ 140 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಗ್ರಾಮೀಣ ಭಾಗದ ಮಕ್ಕಳಲ್ಲಿ ಇಂಗ್ಲಿಷ್ ಸಮರ್ಪಕ ಕಲಿಕೆಗಾಗಿ ಎಲ್‍ಕೆಜಿ, ಯುಕೆಜಿ, ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲಾಗಿದೆ. ಇಂಗ್ಲಿಷ್, ಚಿತ್ರಕಲಾ, ಸಂಗೀತ ಶಿಕ್ಷಕರನ್ನು ಖಾಸಗಿಯಾಗಿ ನೇಮಿಸಿ ಅವರಿಗೆ ವೇತನ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಕ್ಕಳ ಕಲಿಕೆಯ ಅಭಿವೃದ್ಧಿಗೆ ಬೇಕಾದ ಪೂರಕ ಸವಲತ್ತುಗಳು ಹಾಗೂ ಪರಿಣಾಮಕಾರಿ ಕಲಿಕೆಗೆ ಬೇಕಾದ ಮಾರ್ಗಗಳ ಕುರಿತು ಶಿಕ್ಷಕರ ಜತೆ ಚರ್ಚಿಸಿದ ಅವರು, ಪೋಷಕರ ಸಭೆ ನಡೆಸಿ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು ಮತ್ತು ಮಕ್ಕಳ ಕಲಿಕಾ ಪ್ರಗತಿಗೆ ಮನೆಯಲ್ಲೂ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ 15 ಸಾವಿರ ರೂ. ಮೌಲ್ಯದ ಕ್ರೀಡಾ ಉಪಕರಣಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಗ್ರಾಮದ ಮುಖಂಡ ಎಂ.ಕೆ.ರಾಜಣ್ಣ, ಮುಖ್ಯಶಿಕ್ಷಕ ರಾಜೇಶಗೌಡ, ಶಿಕ್ಷಕರಾದ ಸಿ.ಕೆ.ಶಿವರಾಮು, ಅಂದಾನಿಗೌಡ, ಲತಾ, ಮಮತಾ, ಶ್ವೇತಾ, ಎಸ್‍ಡಿಎಂಸಿ ಅಧ್ಯಕ್ಷ ಮಹೇಶ್, ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News