ಸಾಲಮನ್ನಾ ವಿಚಾರದಲ್ಲಿ ರೈತರು ಆತಂಕಪಡಬೇಕಾಗಿಲ್ಲ: ಸಚಿವ ಸಿ.ಎಸ್.ಪುಟ್ಟರಾಜು

Update: 2018-09-12 17:39 GMT

ಮಂಡ್ಯ, ಸೆ.12: ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲದ ಜತೆಗೆ ಖಾಸಗಿ  ಸಾಲವನ್ನೂ ಮನ್ನಾ ಮಾಡಲು ಸರಕಾರ ಮುಂದಾಗಿದ್ದು, ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದ್ದಾರೆ.

ತಾಲೂಕಿನ ಸಾತನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿರ್ಮಿಸಲಾಗಿರುವ ರೈತರ ಸಹಕಾರ ಮಾರುಕಟ್ಟೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಸರಕಾರ ರೈತರ ಸಂಕಷ್ಟಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದರು.

ರೈತರ ಸಂಕಷ್ಟಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸುಮಾರು 48 ಸಾವಿರ ಕೋಟಿ ರೂ.ಗಳ ಬೆಳೆ ಸಾಲಮನ್ನಾ ಮಾಡಿದ್ದಾರೆ. ಜಿಲ್ಲಾ ಬ್ಯಾಂಕ್‍ನ ಅಧ್ಯಕ್ಷರು, ನಿರ್ದೇಶಕರು ನಿನ್ಣೇಯಷ್ಟೇ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಾಲ ಮನ್ನಾದಲ್ಲಿರುವ ಕೆಲವು ನ್ಯೂನತೆಗಳನ್ನು ಸರಿಪಡಿಸುವಂತೆ ಮನವಿ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು. 

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಸಿಎಂ ಜಿಲ್ಲೆಯ ಶಾಸಕರು, ಅಧಿಕಾರಿಗಳ ಸಭೆ ನಡೆಸಿದ್ದಾರೆ. ಮಂಡ್ಯ ಕ್ಷೇತ್ರದ ಶಾಸಕ ಎಂ.ಶ್ರೀನಿವಾಸ್ ಅವರು ಸಹ ಮಂಡ್ಯ ಅಭಿವೃದ್ಧಿ ಕುರಿತಂತೆ ಸಿಎಂ ಅವರಿಗೆ ಮಾಹಿತಿ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಮಂಡ್ಯದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇವೆ. ಎಲ್ಲಾ ಶಾಸಕರೂ ಸಭೆಯಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಿದ್ದಾರೆ. ನೀರಾವರಿ ಮತ್ತು ಸೆಸ್ಕ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದು, ರೈತರ ಸಂಕಷ್ಟ ಪರಿಹಾರಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಆದೇಶ ನೀಡಲಾಗಿದೆ ಎಂದು ಅವರು ಹೇಳಿದರು.

ಸಾತನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹೊಸ ಕಟ್ಟಡ ಪ್ರಾರಂಭವಾಗಿದೆ. ಇಲ್ಲಿ ಅಗತ್ಯ ವಸ್ತುಗಳೆಲ್ಲವೂ ಕಡಿಮೆ ಬೆಲೆಗೆ ದೊರೆಯುತ್ತವೆ. ಸಂಘದಲ್ಲಿ ಸರಕಾರದ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ರೈತರು, ಸಹಕಾರಿಗಳು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. 

ವಿಶ್ವಮಾನವ ಶ್ರೀಕ್ಷೇತ್ರದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕರಾದ ಎಂ. ಶ್ರೀನಿವಾಸ್, ಕೆ.ಸುರೇಶ್‍ಗೌಡ, ತಾಪಂ ಅಧ್ಯಕ್ಷೆ ಶೈಲಜಾ ತಿಮ್ಮೇಗೌಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮನ್‍ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರಾವತಿ ಸಿ.ಅಶ್ವಥ್, ಮಾಜಿ ಅಧ್ಯಕ್ಷ  ಸತೀಶ್, ತಾಪಂ ಸದಸ್ಯೆ ರೇಖಾ ದೇವರಾಜು, ಮನ್‍ಮುಲ್ ನಿರ್ದೇಶಕರಾದ ಎಸ್.ಪಿ ಮಹೇಶ್, ಶಿವಕುಮಾರ್, ಜಗದೀಶ್, ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್, ಸಂಘದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ಉಪಾಧ್ಯಕ್ಷ ಚಿಕ್ಕಬೋರಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಟ್ಟೇಗೌಡ, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News