ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ಬರಲಿ

Update: 2018-09-13 05:26 GMT

ಪೆಟ್ರೋಲ್ ಬೆಲೆ ಏರಿಕೆಯನ್ನು ವಿರೋಧಿಸಿ ದೇಶಾದ್ಯಂತ ಯಶಸ್ವೀ ಬಂದ್ ನಡೆಯಿತು. ಈ ಬಂದ್‌ನ ಯಶಸ್ಸಿನ ಹೆಗ್ಗಳಿಕೆಯನ್ನು ನಿಸ್ಸಂಶಯವಾಗಿ ನರೇಂದ್ರ ಮೋದಿಯವರೇ ಹೊರಬೇಕು. ಇಡೀ ದೇಶ ಯಾವುದೋ ರಾಜಕೀಯ ಪಕ್ಷಗಳ ಒತ್ತಡಕ್ಕೆ ಬಲಿಯಾಗಿ ನಡೆದ ಬಂದ್ ಇದಾಗಿರಲಿಲ್ಲ. ಸ್ವಯಂ ಪ್ರೇರಿತವಾಗಿ ದೇಶ ಸ್ಪಂದಿಸಿದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ನೋಟು ನಿಷೇಧದ ಬಳಿಕವಂತೂ ರೂಪಾಯಿ ಡಾಲರ್ ಮುಂದೆ ನೆಲಕಚ್ಚುತ್ತಲೇ ಹೋಯಿತು. ರೂಪಾಯಿ ಅಪವೌಲ್ಯ ಮತ್ತು ತೈಲ ದರ ಏರಿಕೆ- ಇವು ಒಂದೇ ನಾಣ್ಯದ ಎರಡು ಮುಖಗಳು. ಸರಕಾರ ಇವುಗಳ ಏರಿಳಿತಗಳ ವೇಗಕ್ಕೆ ಕಕ್ಕಾಬಿಕ್ಕಿಯಾಗಿದೆ. ಇಂದು ಇವುಗಳ ಕುರಿತು ಸ್ಪಷ್ಟನೆಯನ್ನು ನೀಡುವ, ದೇಶದ ಜನರಲ್ಲಿ ಭರವಸೆಯನ್ನು ಹುಟ್ಟಿಸುವ ಅರ್ಥಶಾಸ್ತ್ರಜ್ಞರೇ ಸರಕಾರದ ಬಳಿಯಿಲ್ಲ. ರಾಜಕಾರಣಿಗಳು ತಮ್ಮ ತಲೆಗೆ ಹೊಳೆದಂತೆ ಮಾತನಾಡುತ್ತಿದ್ದಾರೆ. ಸನ್ಯಾಸಿಗಳು, ಬಾಬಾಗಳು ಜನರನ್ನು ಸಮಾಧಾನಿಸುತ್ತಿದ್ದಾರೆ.

ಸಾಮಾಜಿಕ ತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಜನರನ್ನು ಗೊಂದಲಗೊಳಿಸುತ್ತಿದ್ದಾರೆ. ತೈಲ ಬೆಲೆ ಏರಿಕೆಯ ಬಗ್ಗೆ ಪ್ರಶ್ನೆ ಎತ್ತಿದಾಕ್ಷಣ ಸರಕಾರದ ಸಮರ್ಥನೆ, ಯುಪಿಎ ಅಧಿಕಾರದಲ್ಲೂ ತೈಲ ಬೆಲೆಯೇರಿಕೆಯಾಗಿತ್ತು ಎನ್ನುವುದಾಗಿದೆ. ಜೊತೆಗೆ ಪೋಸ್ಟ್‌ಕಾರ್ಡ್‌ನಂತಹ ಫೇಕ್‌ಜಾಲ ತಾಣಗಳಲ್ಲಿ, ಈ ಹಿಂದೆ ಯುಪಿಎ ಸರಕಾರದ ಅವಧಿಯಲ್ಲೇ ದರ ಹೆಚ್ಚಳವಾಗಿತ್ತು ಎಂಬ ತಪ್ಪು ಅಂಕಿಅಂಶಗಳಲ್ಲಿ ನೀಡುತ್ತಿವೆ. ಅಂದರೆ ತೈಲ ಬೆಲೆಯೇರಿಕೆಯನ್ನು ತಡೆಯುವ ಬದಲಿಗೆ, ಅದಕ್ಕೆ ಸಮರ್ಥನೆಗಳನ್ನು ನೀಡುವುದರ ಮೂಲಕ, ಸವಾಲುಗಳನ್ನು ಎದುರಿಸಲು ಸರಕಾರ ಮುಂದಾಗಿದೆ. ಇದರ ಅರ್ಥವಿಷ್ಟೇ, ಯಾವುದೇ ಕಾರಣಕ್ಕೂ ಬೆಲೆಯನ್ನು ಇಳಿಸುವುದಿಲ್ಲ ಅಥವಾ ಇಳಿಸಲು ಕ್ರಮ ತೆಗೆದುಕೊಳ್ಳುವುದಿಲ್ಲ. 'ನರೇಂದ್ರ ಮೋದಿಗಾಗಿ ನೀವಿದನ್ನು ಸಹಿಸಿಕೊಳ್ಳಲೇ ಬೇಕು' ಎಂದು ಸರಕಾರ ಒತ್ತಾಯಿಸುತ್ತಿದೆ. ಇಷ್ಟಕ್ಕೂ ತೈಲ ಬೆಲೆಯನ್ನು ಇಳಿಸುವುದು ಸಾಧ್ಯವಿಲ್ಲವೇ? ಅಥವಾ ಅಂತಹದೊಂದು ಇಚ್ಛಾಶಕ್ತಿಯೇ ಸರಕಾರಕ್ಕೆ ಇಲ್ಲವೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಇಂದಿನ ಅಗತ್ಯವಾಗಿದೆ.

ಪೆಟ್ರೋಲ್ ಬೆಲೆಯೇರಿಕೆಯ ಮುಂದೆ ಅಸಹಾಯಕನಂತೆ ವರ್ತಿಸುವ ಸರಕಾರ, ಈ ಮೂಲಕ ಯಾರ ಹಿತಾಸಕ್ತಿಯನ್ನು ಕಾಪಾಡಲು ಯತ್ನಿಸುತ್ತಿದೆ? ಜನಸಾಮಾನ್ಯರ ಹಿತಾಸಕ್ತಿಯನ್ನಂತೂ ಅಲ್ಲ. ಪೆಟ್ರೋಲ್ ಬೆಲೆಯೇರಿಕೆ, ಕೇವಲ ಐಷಾರಾಮಿ ವಾಹನಗಳಿರುವ ಜನರ ಸಮಸ್ಯೆಯಲ್ಲ. ಈ ಏರಿಕೆಗೆ ದೇಶದ ಎಲ್ಲ ಅತ್ಯಗತ್ಯ ವಸ್ತುಗಳ ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಮರ್ಥ್ಯವಿದೆ. ಪೆಟ್ರೋಲ್ ಬೆಲೆ ಏರಿಕೆ ಯಾಕೆ ಆಗುತ್ತಿದೆ ಎಂದು ಕೇಳಿದಾಕ್ಷಣ ಸರಕಾರ, ಕಚ್ಚಾ ತೈಲ ಬೆಲೆಯ ಕಡೆಗೆ ಕೈ ತೋರಿಸುತ್ತಿದೆ. ರೂಪಾಯಿ ಅಪವೌಲ್ಯವನ್ನೂ ಹೊಣೆ ಮಾಡುತ್ತಿದೆ. ಪೆಟ್ರೋಲ್ ಬೆಲೆಯನ್ನು ನಿಯಂತ್ರಿಸುವ ಅಧಿಕಾರ ನಮ್ಮ ಕೈಯಲ್ಲಿ ಇಲ್ಲ ಎಂದು ಸಬೂಬು ಹೇಳುತ್ತಿದೆ. ಇದೇ ಸಂದರ್ಭದಲ್ಲಿ ಏಶ್ಯಾದ ಇತರ ದೇಶಗಳಲ್ಲಿ ಅದರಲ್ಲೂ ಆರ್ಥಿಕತೆಯಲ್ಲಿ ಭಾರತಕ್ಕಿಂತಲೂ ಹಿಂದಿರುವ ದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬಹಳ ಕಡಿಮೆಯಿದೆ ಎನ್ನುವುದನ್ನು ಮರೆ ಮಾಚುತ್ತದೆ.

ಹಾಗಾದರೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿರಲು ಕಾರಣವೇನು? ಇದಕ್ಕೆ ಕಾರಣ ಕೇಂದ್ರ ವಸೂಲಿ ಮಾಡುವ ಸುಂಕ ಮತ್ತು ರಾಜ್ಯ ಸರಕಾರಗಳು ಹೇರುವ ವ್ಯಾಟ್. ಸದ್ಯ ಪ್ರತಿ ಲೀಟರ್ ಪೆಟ್ರೋಲ್‌ಗೆ ಕೇಂದ್ರ ಸರಕಾರ 19.48ರೂ. ಅಬಕಾರಿ ಸುಂಕ ವಸೂಲಿ ಮಾಡಿದರೆ ಡೀಸೆಲ್‌ಗೆ ಪ್ರತಿ ಲೀಟರ್‌ಗೆ 15.33ರೂ. ಸುಂಕ ಪಡೆಯುತ್ತದೆ. ಇದರ ಮೇಲೆ ರಾಜ್ಯಗಳು ವ್ಯಾಟ್ ಹೇರುತ್ತವೆ. ಪೆಟ್ರೋಲ್ ಮೇಲೆ ವಿಧಿಸಲಾಗುವ ಈ ಪರೋಕ್ಷ ತೆರಿಗೆಗಳ ದರವು ಶೇ.100 ದಾಟಿದ್ದರೆ ಡೀಸೆಲ್ ವಿಷಯದಲ್ಲಿ ಶೇ.70ಕ್ಕೆ ತಲುಪಿದೆ. ಈ ತೆರಿಗೆಗಳು ಇಲ್ಲದೆ ಹೋಗಿದ್ದರೆ ಕಚ್ಚಾತೈಲದ ಸದ್ಯದ ಅಂತರ್‌ರಾಷ್ಟ್ರೀಯ ಮಾರುಕಟ್ಟೆ ಬೆಲೆ ಏರಿಕೆಯ ಹೊರತಾಗಿಯೂ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 40ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು.

 ಎನ್‌ಡಿಎ ಆಡಳಿತದ ಅವಧಿಯಲ್ಲಿ ಅಬಕಾರಿ ಸುಂಕ ಸಂಗ್ರಹಕ್ಕೆ ಕೇಂದ್ರ ಸರಕಾರವು ತೈಲೋತ್ಪನ್ನಗಳನ್ನೇ ನೆಚ್ಚಿಕೊಂಡಿದೆ. 2009-14ರ ಐದು ವರ್ಷಗಳ ಅವಧಿಯಲ್ಲಿ ಒಟ್ಟಾರೆ ತೆರಿಗೆ ಆದಾಯದಲ್ಲಿ ತೈಲೋತ್ಪನ್ನಗಳಿಂದ ಸಂಗ್ರಹವಾಗುವ ತೆರಿಗೆಯ ಪಾಲು ಶೇ.8.8ರ ಸರಾಸರಿಯಲ್ಲಿತ್ತು. 2014-15ರಿಂದ 2017-18ರಲ್ಲಿ ಈ ಸರಾಸರಿ ಶೇ.12.5ಕ್ಕೆ ಏರಿದೆ. ಇದೇ ವೇಳೆ, ಯುಪಿಎ 2ರ ಅವಧಿಯಲ್ಲಿ ಒಟ್ಟಾರೆ ತೆರಿಗೆ ಆದಾಯ ಸಂಗ್ರಹದಲ್ಲಿ ಶೇ.36.5 ಇದ್ದ ಕಾರ್ಪೊರೇಟ್ ತೆರಿಗೆಯ ಪಾಲು ಶೇ.30.7ಕ್ಕೆ ಕುಸಿದಿದೆ. ಯುಪಿಎ 2 ಅವಧಿಯಲ್ಲಿ ಶೇ.19 ಇದ್ದ ಆದಾಯ ತೆರಿಗೆ ಸಂಗ್ರಹವು ಎನ್‌ಡಿಎ ಅವಧಿಯಲ್ಲಿ ಶೇ.21ಕ್ಕೆ ಏರಿಕೆಯಾಗಿದೆ. ಈ ಅಂಕಿಅಂಶಗಳು ಎನ್‌ಡಿಎ ಸರಕಾರದ ಆದಾಯ ಸಂಗ್ರಹ ವಿಧಾನದಲ್ಲಿರುವ ಪಕ್ಷಪಾತ ಧೋರಣೆಯನ್ನು ಬಯಲು ಮಾಡುತ್ತದೆ. ಒಂದೆಡೆ ಕಾರ್ಪೊರೇಟ್ ಸಂಸ್ಥೆಗಳು ಪಾವತಿಸುವ ತೆರಿಗೆಯಲ್ಲಿ ಗಣನೀಯ ಇಳಿಕೆಯಾಗಿದೆ. ಇಂಧನ ಬಳಕೆದಾರರ ತೆರಿಗೆಯ ಪಾಲು ಮತ್ತು ಆದಾಯ ತೆರಿಗೆ ಪಾವತಿದಾರರ ಪಾಲು ಏರಿಕೆ ಕಂಡಿದೆ. ಬಡವರು ಮತ್ತು ಮಧ್ಯಮ ವರ್ಗದ ಜನರನ್ನು ಬಲಿಪಶು ಮಾಡಿ ಕಾರ್ಪೊರೇಟ್‌ಗಳಿಗೆ ಲಾಭ ಮಾಡಿಕೊಡಲಾಗುತ್ತಿದೆ. ಹಾಗಾಗಿ ತೈಲದ ಮೇಲೆ ವಿಧಿಸುತ್ತಿರುವ ಅನ್ಯಾಯದ ತೆರಿಗೆಯನ್ನು ನಿಯಂತ್ರಿಸಿದರೆ, ಜನರು ನಿರಾಳವಾಗಿ ಉಸಿರು ಬಿಡಬಹುದು.

 ಸೀಮೆಎಣ್ಣೆ ಮತ್ತು ಅಡುಗೆ ಅನಿಲದಂತೆ ಪೆಟ್ರೋಲ್ ಮತ್ತು ಡೀಸೆಲ್‌ನ್ನು ಕೂಡಾ ಜಿಎಸ್‌ಟಿ ವ್ಯಾಪ್ತಿಗೆ ತರುವ ಅಗತ್ಯವಿದೆ. ಪೆಟ್ರೋಲ್, ಡೀಸೆಲ್ ಮೇಲೆ ಅತೀಹೆಚ್ಚಿನ ಶೇ.28 ರ ದರದಲ್ಲಿ ಜಿಎಸ್‌ಟಿ ವಿಧಿಸಿದರೂ ತೈಲ ಬೆಲೆ 55ರೂ. ದಾಟುವುದಿಲ್ಲ. ಇದರಿಂದ ಸರಕಾರಕ್ಕೆ ಉಂಟಾಗುವ ಆದಾಯ ನಷ್ಟವನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಹೆಚ್ಚಿನ ತೆರಿಗೆಯನ್ನು ವಿಧಿಸುವ ಮೂಲಕ ಮತ್ತು ಈ ಸಂಸ್ಥೆಗಳಿಗೆ ನೀಡಿರುವ ತೆರಿಗೆ ವಿನಾಯಿತಿಯನ್ನು ತೆಗೆದುಹಾಕುವ ಮೂಲಕ ಸರಿದೂಗಿಸಬಹುದು. ಕಳೆದ ಎರಡು ವಿತ್ತೀಯ ವರ್ಷಗಳಲ್ಲಿ ಕಾರ್ಪೊರೇಟ್‌ಗಳಿಗೆ ನೀಡಿದ ತೆರಿಗೆ ವಿನಾಯಿತಿಯಿಂದಾಗಿ ಸರಕಾರ ಪ್ರತಿವರ್ಷ ಕಳೆದುಕೊಂಡಿರುವ ಆದಾಯದ ಪ್ರಮಾಣ 85,000 ಕೋಟಿ ರೂ. ಆಗಿದೆ ಎಂದು ಸರಕಾರದ ವರದಿ ತಿಳಿಸುತ್ತದೆ. ಸರಕಾರ ಶ್ರೀಮಂತರಿಗೆ ನೀಡಿರುವ ವಿನಾಯಿತಿಯನ್ನು ಅದು ಜನರ ಬೆವರು, ರಕ್ತದಿಂದ ಬಸಿದುಕೊಳ್ಳಲು ಹೊರಟಿದೆ. ಈ ಜನ ವಿರೋಧಿ, ಕಾರ್ಪೊರೇಟ್ ಸ್ನೇಹಿ ತೆರಿಗೆ ವಿಧಾನವೇ ತೈಲ ಬೆಲೆಯಿಂದ ದೇಶ ಕಂಗೆಡುವಂತೆ ಮಾಡಿದೆ. ಸರಕಾರ, ತಾನು ಜನ ಸಾಮಾನ್ಯರ ಪರವೋ, ಬೃಹತ್ ಶ್ರೀಮಂತರ ಪರವೋ? ಸ್ಪಷ್ಟ ಪಡಿಸಲೇ ಬೇಕಾದಂತಹ ದಿನ ಹತ್ತಿರ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News