ಬೆಳಗಾವಿ ಜಿಲ್ಲೆ ವಿಭಜನೆಗೆ ಸಿಎಂ ಹೆಚ್ ಡಿಕೆ ಹೊಸ ತಂತ್ರ ?

Update: 2018-09-13 05:11 GMT

ಬೆಳಗಾವಿ, ಸೆ.13:ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರಿಕೃತ ರಾಜಕಾರಣಕ್ಕೆ ಕಡಿವಾಣ ಹಾಕಲು ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಬೆಳಗಾವಿ ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಭಜಿಸಲು ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗಾವಿಯನ್ನು ವಿಭಜಿಸಿ ಬೆಳಗಾವಿ, ಗೋಕಾಕ್ ಮತ್ತು  ಚಿಕ್ಕೋಡಿ ಜಿಲ್ಲೆಗಳಾಗಿ ರಚಿಸುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಯೋಜನೆಯಾಗಿದ್ದು, ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಮೂರು ಲೋಕಸಭಾ ವ್ಯಾಪ್ತಿಗೊಳಪಟ್ಟ ಬೆಳಗಾವಿ ಜಿಲ್ಲೆ 18 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿವೆ. 10 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು 8 ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಇದೀಗ  ಬೆಳಗಾವಿ ಜಿಲ್ಲೆಯಲ್ಲಿ ಗರಿಗೆದರಿರುವ ರಾಜಕಾರಣ  ಸಮ್ಮಿಶ್ರ ಸರಕಾರಕ್ಕೆ ಸಮಸ್ಯೆಯನ್ನು ತಂದೊಡ್ಡಿದೆ.  ನೂರು ದಿನ ಪೂರೈಸಿದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರಕ್ಕೆ  ಮತ್ತೆ ಹೊಸ ಸವಾಲು  ಎದುರಾಗಿದೆ, ಬೆಳಗಾವಿ ರಾಜಕೀಯ ಸಮ್ಮಿಶ್ರ ಸರಕಾರಕ್ಕೆ  ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ.

ಜಾರಕಿಹೊಳಿ ಸಹೋದರರು ಬಂಡಾಯದ ಬಾವುಟ ಹಾರಿಸಿರುವುದು ಕಾಂಗ್ರೆಸ್ ಗೆ ತಲೆನೋವಾಗಿ ಪರಿಣಮಿಸಿದೆ. ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ ವೇಳೆ ಕಾಣಿಸಿಕೊಂಡ ವಿವಾದ  ಪಕ್ಷದೊಳಗೆ ಭಿಕ್ಕಟ್ಟಿಗೆ ಕಾರಣವಾಗಿದೆ. ಬೆಳಗಾವಿ ಬಂಡಾಯದ ಬಿಸಿ  ಇದೀಗ  ಬಳ್ಳಾರಿಗೂ  ತಟ್ಟಿದೆ.

ಬೆಳಗಾವಿ ಜಿಲ್ಲೆಯ ವಿಭಜನೆಯಿಂದ ಎಲ್ಲದಕ್ಕೂ ಕಡಿವಾಣ ಹಾಕಲು ಸಾಧ್ಯ ಎನ್ನುವುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬಲವಾಗಿ ನಂಬಿದ್ದಾರೆ. ಗಡಿವಿವಾದದ ಹಿನ್ನೆಲೆಯಲ್ಲಿ ಮುಖ್ಯ ಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಚಿಂತನೆಗೆ ಸ್ವಲ್ಪ ಮಟ್ಟಿನ ಹಿನ್ನಡೆ ಉಂಟಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News