ಅಬಕಾರಿ ಇಲಾಖೆಯನ್ನೇ ಮುಚ್ಚಿಸಿ ಬಿಡ್ತೀನಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

Update: 2018-09-14 12:32 GMT

ಕಲಬುರಗಿ, ಸೆ. 14: ‘ಜಿಲ್ಲೆಯ ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸದಿದ್ದರೆ ಅಬಕಾರಿ ಇಲಾಖೆಯನ್ನೇ ಮುಚ್ಚಿಸಿ ಬಿಡುತ್ತೀನಿ’ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಅಬಕಾರಿ ಇಲಾಖಾ ಅಧಿಕಾರಿಗಳಿಗೆ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಬಹುತೇಕ ಕಡೆ ಕಿರಾಣಿ ಅಂಗಡಿಗಳಲ್ಲಿಯೂ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಆದರೂ, ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ನಿಮಗೇನಾದರೂ ಅಬಕಾರಿ ಇಲಾಖೆ ಟಾರ್ಗೆಟ್ ನೀಡಿದೆಯಾ ಹೇಗೆ? ಎಂದು ಪ್ರಶ್ನಿಸಿದರು.

ಅಕ್ರಮ ಮದ್ಯದ ಅಂಗಡಿ ಮುಚ್ಚಿಸಲು ಆಗುವುದಿಲ್ಲ ಎಂದಾದರೆ ಕೂಡಲೇ ಬರೆದುಕೊಡಿ. ಮನ ಬಂದಂತೆ ಮದ್ಯದ ಅಂಗಡಿಗಳ ಸ್ಥಳಾಂತರವೂ ನಡೆದಿದೆ. ಜಿಲ್ಲಾಧಿಕಾರಿಗಳ ಗಮನಕ್ಕೆ ತರದೆ ಅನಧಿಕೃತವಾಗಿ ಮದ್ಯದ ಅಂಗಡಿ ಸ್ಥಳಾಂತರ ಆಗಿರುವುದು ನನ್ನ ಗಮನಕ್ಕೆ ಬಂದರೆ ಇಲಾಖೆಯನ್ನೇ ಮುಚ್ಚಿಸಿಬಿಡುತ್ತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪ್ರತಿಯೊಂದಕ್ಕೂ ಉಡಾಫೆ ಉತ್ತರ ನೀಡಿದರೆ ಸರಿ ಹೋಗುವುದಿಲ್ಲ. ನಿಮ್ಮ ನಾಟಕವನ್ನು ನಿಲ್ಲಿಸಿದರೆ ಸರಿ, ಇಲ್ಲದಿದ್ದರೆ ನಿಮಗೆ ಉಳಿಗಾಲವಿಲ್ಲ ಎಂದ ಅವರು, ಚುನಾವಣೆಯ ನೀತಿ ಸಂಹಿತೆ ಬಂತೆಂದು ನೀವೆಲ್ಲಾ ಮೆರೆದದ್ದು ಸಾಕು. ದುಡ್ಡು ಕೊಡಲಿಲ್ಲವೆಂದರೆ ಏನೂ ಕೆಲಸವೇ ಆಗುವುದಿಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ ಎಂದು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಮಟ್ಟದಲ್ಲಿ ಆಡಳಿತ ಸರಿಯಾಗಿರದಿದ್ದರೆ ಶಾಸಕರೇಕೆ ವಿಧಾನಸೌಧದ ಸುತ್ತ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದ ಅವರು, ಜನ ಸಾಮಾನ್ಯರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಮೂಲಕ ಅವರು ಕಚೇರಿಗಳ ಸುತ್ತ ಗಿರಕಿ ಹೊಡೆಯುವುದನ್ನು ತಪ್ಪಿಸಿ ಎಂದು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News