ಸರಕಾರ ಪತನಕ್ಕೆ ಮುಹೂರ್ತವಿಟ್ಟವರಿಗೆ ಮುಂದೆ ಕಂಟಕ ಕಾದಿದೆ: ಹೆಚ್.ಡಿ.ದೇವೇಗೌಡ

Update: 2018-09-14 13:09 GMT

ಶಿವಮೊಗ್ಗ, ಸೆ. 14: ಸರ್ಕಾರ ಅಸ್ಥಿರಗೊಳಿಸಲು ಮೂಹೂರ್ತ ಇಟ್ಟವರಿಗೆ ಮುಂದೆ ಕಂಟಕ ಕಾದಿದೆ. ದೇವರು ಮತ್ತು ಗುರುಗಳ ಅನುಗ್ರಹವಿರುವುದರಿಂದ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಹೇಳಿದರು.

ಶುಕ್ರವಾರ ನಗರದ ಲಗನ್ ಕಲ್ಯಾಣ ಮಂದಿರದಲ್ಲಿ ಮಲೆನಾಡು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಕೆಲ ಶಕ್ತಿಗಳು ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ. ಮೈತ್ರಿ ಸರ್ಕಾರ ಪತನವಾಗುತ್ತೆ, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಒಂದು ವರ್ಗ ಕಾದು ಕುಳಿತಿದೆ. ಆದರೆ ಮೂಹೂರ್ತ ಇಟ್ಟವರಿಗೆ ಮುಂದೆ ಕಂಟಕ ಕಾದಿದೆ. ದೇವರು ಮತ್ತು ಗುರುಗಳ ಅನುಗ್ರಹವಿರುವುದರಿಂದ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಸರ್ಕಾರ ಸ್ಥಿರವಾಗಿರುತ್ತದೆ ಎಂದು ಹೇಳಿದರು.

ಉತ್ತಮ ಕೆಲಸ: ಸರ್ಕಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಉತ್ತಮ ಕೆಲಸ ಮಾಡುತ್ತಿದೆ. ಕಳೆದ 3 ತಿಂಗಳಿನಿಂದ ಸರ್ಕಾರ ಆಗ ಬೀಳುತ್ತೆ, ಈಗ ಬೀಳುತ್ತೆ ಎಂದು ಕೆಲವರು ಭವಿಷ್ಯ ಹೇಳುತ್ತಿದ್ದಾರೆ. ಹಾಗೆಯೇ ಅಧಿಕಾರ ಹಿಡಿಯಲು ಮೂಹೂರ್ತ ಇಟ್ಟುಕೊಂಡು ಕಾದು ಕುಳಿತಿರುವವರಿಗೆ ಕಾಲವೇ ಉತ್ತರ ನೀಡಲಿದೆ ಎಂದು ಬಿಜೆಪಿ ನಾಯಕರಿಗೆ ಕುಟುಕಿದರು. 

37 ಜನ ಶಾಸಕರನ್ನಿಟ್ಟುಕೊಂಡು ಸಿಎಂ ಆಗಿರುವುದು ಅಷ್ಟು ಸುಲಭದ ಮಾತಲ್ಲ. ಯಾವುದೋ ಒಂದು ಶಕ್ತಿ ನಮ್ಮ ಬೆನ್ನಿಗಿದೆ. ಅದು ನಮ್ಮ ಸರ್ಕಾರವನ್ನು ಸಮಸ್ಯೆಯಿಂದ ಪಾರು ಮಾಡಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. 

ಯತ್ನಿಸಲಿ: ಸಹಕಾರ ಸಂಘಗಳು ಅಭಿವೃದ್ದಿಯತ್ತ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಸಂಘದ ಧ್ಯೇಯೋದ್ದೇಶಗಳಿಗೆ ಅನುಗುಣವಾಗಿ ಮುಖಂಡರು ಕಾರ್ಯನಿರ್ವಹಿಸಬೇಕು. ಸಮಾಜದ ಏಳ್ಗೆಗೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಮಲೆನಾಡು ಕ್ರೆಡಿಟ್ ಕೋ - ಆಪರೇಟಿವ್ ಸೊಸೈಟಿ ಕಾರ್ಯಾಚರಿಸುತ್ತಿರುವುದು ನಿಜಕ್ಕೂ ಅಭಿನಂದನೀಯ ಕೆಲಸ ಎಂದು ಇದೇ ಸಂದರ್ಭ ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪ್ರಸನ್ನನಾಥ ಸ್ವಾಮೀಜಿ, ಸಚಿವರಾದ ಡಿ.ಸಿ.ತಮ್ಮಣ್ಣ, ಬಂಡೆಪ್ಪ ಕಾಶೆಂಪುರ್, ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಮಾಜಿ ಶಾಸಕರಾದ ಕಿಮ್ಮನೆ ರತ್ನಾಕರ್, ಜಿ. ಮಾದಪ್ಪ, ಶಾರದಾ ಪೂರ್ಯನಾಯ್ಕ್, ಮುಖಂಡ ಎಂ.ಶ್ರೀಕಾಂತ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News