ಮಗನ ಸ್ಥಿತಿ ಕಂಡು ಮೃತಪಟ್ಟ ತಂದೆ: ಸಾವಿನ ಆಘಾತದ ನಡುವೆಯೂ ಮಾನವೀಯತೆ ಮೆರೆದ ಕುಟುಂಬ !

Update: 2018-09-14 14:38 GMT

ಶಿವಮೊಗ್ಗ, ಸೆ.14: ಆಘಾತದ ಬರ ಸಿಡಿಲು, ಸರಣಿ ಸಾವುಗಳ ಶೋಕದ ನಡುವೆಯೂ ಹಲವರ ಜೀವ ಉಳಿಸುವ ಸತ್ಕಾರ್ಯವೊಂದನ್ನು ಭದ್ರಾವತಿಯ ಕುಟುಂಬವೊಂದು ಮಾಡಿದೆ. ಒಂದೆಡೆ ಮೆದುಳು ನಿಷ್ಕ್ರಿಯಗೊಂಡು ಸಾವಿನ ಕೊನೆಯ ಕ್ಷಣ ಎಣಿಸುತ್ತಿರುವ ಮಗ, ಮಗನ ಈ ದುರಂತ ಸ್ಥಿತಿ ಕೇಳಿ ಆಘಾತದಿಂದ ಮೃತಪಟ್ಟ ತಂದೆ. ಇಂತಹ ವಿಧಿಯಾಟದ ಘೋರ ಸ್ಥಿತಿಯ ನಡುವೆಯೇ ಸಾವಿನಂಚಿನಲ್ಲಿರುವ ಮಗನ ಅಂಗಾಂಗ ದಾನಕ್ಕೆ ನಿರ್ಧರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

ಹಾಗೆಯೇ ಸಾವಿನಂಚಿನಲ್ಲಿದ್ದ ಹರೀಶ್‍ನನ್ನು ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ತುರ್ತುಗತಿಯಲ್ಲಿ ಕೊಂಡೊಯ್ಯಲು, ಶಿವಮೊಗ್ಗ ಪೊಲೀಸರು ಬೆಂಗಳೂರು ರಸ್ತೆಯಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡುವ ಮೂಲಕ ಕುಟುಂಬದ ಮಾನವೀಯ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. 

ಘಟನೆಯ ಹಿನ್ನೆಲೆ: ಭದ್ರಾವತಿ ಗ್ರಾಮದ ಜೇಡಿಕಟ್ಟೆಯ ನಿವಾಸಿ, ಕೃಷಿ ಕುಟುಂಬ ಹಿನ್ನೆಲೆಯ ಬಾಲಕೃಷ್ಣ ಹಾಗೂ ಗೌರಮ್ಮ ದಂಪತಿಗೆ ಇಬ್ಬರು ಪುತ್ರರಿದ್ದು, ಇದರಲ್ಲಿ ಎರಡನೇಯವರಾದ ಹರೀಶ್ (32) ಎಂಬವರು ಗುರುವಾರ ಬೆಳಿಗ್ಗೆ ಗದ್ದೆಯಲ್ಲಿ ಕೆಲಸ ಮಾಡುವಾಗ ಫಿಟ್ಸ್ ಗೆ ತುತ್ತಾಗಿದ್ದರು. ಅವರಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಕುಟುಂಬದವರು ನಿರ್ಮಲ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಬ್ರೈನ್ ಸ್ಟ್ರೋಕ್‍ಗೆ ಆಗಿದ್ದು ಬೆಳಕಿಗೆ ಬಂದಿತ್ತು. 

ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅಲ್ಲಿನ ವೈದ್ಯರು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಕೊಂಡೊಯ್ಯಲು ಸೂಚಿಸಿದರು. ಅದರಂತೆ ಮ್ಯಾಕ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ. ತೀವ್ರ ಸ್ವರೂಪದ ಬ್ರೈನ್ ಸ್ಟ್ರೋಕ್‍ಗೆ ತುತ್ತಾಗಿರುವುದು ವೈದ್ಯರ ತಪಾಸಣೆಯಿಂದ ತಿಳಿದುಬಂದಿತ್ತು. ಇದರಿಂದ ಹರೀಶ್ ಬದುಕುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೇ, 'ಹರೀಶ್ ಕೋಮಾ ಸ್ಥಿತಿಯಿಂದ ಹೊರಬರುವುದು ಅಸಾಧ್ಯ. ಈ ಕಾರಣದಿಂದ ಸುಸ್ಥಿತಿಯಲ್ಲಿರುವ ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಇತರರ ಜೀವ ಉಳಿಸುವ ಕೆಲಸ ಮಾಡಬಹುದಾಗಿದೆ' ಎಂಬ ವಿಷಯವನ್ನು ವೈದ್ಯರು ಅವರ ಕುಟುಂಬದವರಿಗೆ ಸಲಹೆ ನೀಡಿದ್ದರು. 

ಈ ವೇಳೆ ಮಗ ಬದುಕುಳಿಯುವುದು ಕಷ್ಟಕರ ಎಂಬ ಮಾಹಿತಿಯು ಬಾಲಕೃಷ್ಣ (59) ರವರನ್ನು ತೀವ್ರ ಆಘಾತಕ್ಕೀಡು ಮಾಡಿತ್ತು. ಅವರೂ ಪಿಟ್ಸ್ ಗೆ ತುತ್ತಾಗಿದ್ದರು. ತಡರಾತ್ರಿ 12 ಗಂಟೆ ಸುಮಾರಿಗೆ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದರು. 

ಬೆಂಗಳೂರಿಗೆ: ಇಷ್ಟೆಲ್ಲ ಆಘಾತಗಳ ನಡುವೆಯೇ ಹರೀಶ್‍ರವರ ದೇಹದ ಪ್ರಮುಖ ಅಂಗಾಂಗಳನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾನ ಮಾಡಲು ಕುಟುಂಬ ವರ್ಗದವರು ನಿರ್ಧರಿಸಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆಯವರನ್ನು ಕುಟುಂಬದವರು ಸಂಪರ್ಕಿಸಿ, ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡುವಂತೆ ಕೋರಿದ್ದರು. ಅದರಂತೆ ಎಸ್.ಪಿ.ಯವರು ಶಿವಮೊಗ್ಗದಿಂದ ಬೆಂಗಳೂರುವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆಗೆ ಕ್ರಮಕೈಗೊಂಡಿದ್ದರು.
ಶುಕ್ರವಾರ ಬೆಳಗ್ಗೆ 6.30 ರ ಸುಮಾರಿಗೆ ಮ್ಯಾಕ್ಸ್ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ನಲ್ಲಿ ಹರೀಶ್‍ರನ್ನು ಬೆಂಗಳೂರಿನ ಮ್ಯಾಕ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, 12 ಗಂಟೆಯೊಳಗೆ ಬೆಂಗಳೂರಿನ ಮ್ಯಾಕ್ಸ್ ಆಸ್ಪತ್ರೆಗೆ ಹರೀಶ್ ರನ್ನು ದಾಖಲಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News