ಆರೋಗ್ಯ ಕರ್ನಾಟಕ ಯೋಜನೆ: ಧಾರವಾಡ ಜಿಲ್ಲೆಯಲ್ಲಿ 25 ಸಾವಿರ ಕಾರ್ಡ್ ವಿತರಣೆ; ಡಾ.ಆರ್.ಎಂ.ದೊಡ್ಡಮನಿ

Update: 2018-09-14 15:27 GMT

ಧಾರವಾಡ, ಸೆ.14: ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ 25 ಸಾವಿರ ಆರೋಗ್ಯ ಕಾರ್ಡುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ವಿತರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ಎಂ.ದೊಡ್ಡಮನಿ ತಿಳಿಸಿದ್ದಾರೆ.

ಸದ್ಯ ಒಳರೋಗಿಗಳಿಗೆ ಮಾತ್ರ ಕಾರ್ಡುಗಳನ್ನು ವಿತರಿಸಲಾಗುತ್ತಿದೆ. ಹಾಗೂ 381 ಫಲಾನುಭವಿಗಳಿಗೆ ರೆಫರಲ್ ನಮೂನೆಗಳನ್ನು ಹೆಚ್ಚುವರಿ ಚಿಕಿತ್ಸೆಗಾಗಿ ವಿತರಿಸಲಾಗಿದ್ದು, ಇಲ್ಲಿಯವರೆಗೆ 2,54,55,012 ರೂ.ಮೊತ್ತದ ಚಿಕಿತ್ಸೆಯನ್ನು ಆರೋಗ್ಯ ಕರ್ನಾಟಕದಡಿ ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಉಚಿತ ಮತ್ತು ರಿಯಾಯಿತಿ ದರದಲ್ಲಿ ಚಿಕಿತ್ಸೆಯನ್ನು ಎಲ್ಲ ಜನರಿಗೆ ನೀಡಲಾಗುತ್ತಿದೆ. ಈ ಯೋಜನೆಯಡಿ ಒಟ್ಟು 1516 ಚಿಕಿತ್ಸಾ ಸೇವೆಗಳು ಲಭ್ಯವಿವೆ ಎಂದು ಅವರು ತಿಳಿಸಿದ್ದಾರೆ.

ಪ್ರಾಥಮಿಕ ಮತ್ತು ದ್ವಿತೀಯ(2ಎ) ಚಿಕಿತ್ಸಾ ಸೌಲಭ್ಯಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸೌಲಭ್ಯಗಳಿಗನುಗುಣವಾಗಿ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು. ಇವುಗಳಿಗೆ ಯಾವುದೇ ಉಲ್ಲೇಖಿತ ನಿಗದಿತ ನಮೂನೆ ಅಗತ್ಯವಿರುವುದಿಲ್ಲ ಎಂದು ದೊಡ್ಡಮನಿ ಹೇಳಿದ್ದಾರೆ.

ಆರೋಗ್ಯ ಕಾರ್ಡ್ ಹೊಂದಿರುವ ವ್ಯಕ್ತಿಗಳು ದ್ವಿತೀಯ ಹಂತದ ಚಿಕಿತ್ಸೆಗಳಿಗೆ 30 ಸಾವಿರ ರೂ.ವರೆಗೆ ಚಿಕಿತ್ಸೆ ಪಡೆಯಬಹುದು. ಇವುಗಳಿಗೆ ಉಲ್ಲೇಖಿತ ನಿಗದಿತ ನಮೂನೆಗಳನ್ನು ತಾಲೂಕು ಆಸ್ಪತ್ರೆಗಳಿಂದ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ. ತೃತೀಯ ಹಂತದ ಕಾಯಿಲೆಗಳಿಗೂ ತಾಲೂಕು ಆಸ್ಪತ್ರೆಗಳಿಂದ ಉಲ್ಲೇಖಿತ ನಿಗದಿತ ನಮೂನೆಯ ಕಾರ್ಡ್ ಪಡೆದು ಸರಕಾರಿ ಆಸ್ಪತ್ರೆಗಳಾದ ಹುಬ್ಬಳ್ಳಿಯ ಕಿಮ್ಸ್, ಧಾರವಾಡ ಜಿಲ್ಲಾ ಆಸ್ಪತ್ರೆ, ನವಲಗುಂದ ತಾಲೂಕು ಆಸ್ಪತ್ರೆ, ಕುಂದಗೋಳ ತಾಲೂಕು ಆಸ್ಪತ್ರೆ, ಕಲಘಟಗಿ ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಾದ ಧಾರವಾಡದ ಎಸ್‌ಡಿಎಂ ನಾರಾಯಣ ಹೃದಯಾಲಯ.

ಎಸ್.ಡಿ.ಎಂ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆ, ಹುಬ್ಬಳ್ಳಿಯ ಎಚ್.ಸಿ.ಜಿ ಎನ್.ಎಂ.ಆರ್ ಕ್ಯಾನ್ಸರ್ ಆಸ್ಪತ್ರೆ, ಶ್ರೀ ಬಾಲಾಜಿ ಆಸ್ಪತ್ರೆ, ಶಕುಂತಲಾ ಮೆಮೋರಿಯಲ್ ಆಸ್ಪತ್ರೆ, ಸುಚಿರಾಯ ಆಸ್ಪತ್ರೆ, ವಿವೇಕಾನಂದ ಜನರಲ್ ಆಸ್ಪತ್ರೆ, ಶಿವಕೃಪಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು. ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ನಮೂದಿಸಿದ 154 ತುರ್ತು ಚಿಕಿತ್ಸೆಗಳಿಗೆ ಯಾವುದೇ ಉಲ್ಲೇಖಿತ ನಿಗದಿತ (ರೆಫರಲ್) ಕಾರ್ಡ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆಯನ್ನು ಪಡೆಯಬಹುದು ಎಂದು ದೊಡ್ಡಮನಿ ಹೇಳಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಆರೋಗ್ಯ ಕರ್ನಾಟಕ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದ್ದು ಫಲಾನುಭವಿಗಳು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆ: 8861005549, ಹುಬ್ಬಳ್ಳಿ: 8861005547, ಕಲಘಟಗಿ: 8861005545, ಕುಂದಗೋಳ: 8861005548, ನವಲಗುಂದ: 8861005546 ಹಾಗೂ ಜಿಲ್ಲಾ ಸಂಯೋಜಕ ನಾಗರಾಜ ಹೊನ್ನಪ್ಪಗೌಡ್ರ: 8861005503, ಕರ್ನಾಟಕ ಆರೋಗ್ಯ ಯೋಜನೆಯ ಸಹಾಯವಾಣಿ ಸಂಖ್ಯೆ: 104, ಟೊಲ್ ಪ್ರೀ ಸಂಖ್ಯೆ: 1800-4258330 ಮತ್ತು ಆಯಾ ಸರಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಮಿತ್ರರನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟನೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News