ಅತಿವೃಷ್ಟಿ ಹಾನಿ: ಕಷ್ಟ, ನಷ್ಟದ ಸಮಗ್ರ ಮಾಹಿತಿ ಪ್ರಕಟಿಸಿದ ಕೊಡಗು ಜಿಲ್ಲಾಡಳಿತ

Update: 2018-09-14 17:37 GMT

ಮಡಿಕೇರಿ, ಸೆ.14: ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯಲ್ಲಿ ಜನ, ಜಾನುವಾರು, ವಾಸದ ಮನೆ, ಬೆಳೆ ಹಾನಿ, ರಸ್ತೆ, ವಿದ್ಯುತ್ ಸೇರಿದಂತೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಈ ಸಂಬಂಧ ಪ್ರಾಥಮಿಕ ಮಾಹಿತಿಯ ನಷ್ಟದ ವಿವರ ಹೀಗಿದೆ.      

ಕಳೆದ ಏಪ್ರಿಲ್ ನಿಂದ ಇಲ್ಲಿಯ ವರೆಗೆ ಅತಿವೃಷ್ಟಿ ಹಾಗೂ ಪ್ರವಾಹಕ್ಕೆ ಸಿಲುಕಿ 20 ಜನರು ಮೃತಪಟ್ಟಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ 14 ಮಂದಿ, ವಿರಾಜಪೇಟೆ ತಾಲೂಕಿನಲ್ಲಿ ನಾಲ್ವರು ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮಡಿಕೇರಿ ತಾಲೂಕಿನಲ್ಲಿ 31, ವಿರಾಜಪೇಟೆ ತಾಲೂಕಿನಲ್ಲಿ 16 ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ 35 ಹೀಗೆ ಒಟ್ಟು 82 ಜಾನುವಾರುಗಳು ಸಾವನ್ನಪ್ಪಿವೆ.

ಅತಿವೃಷ್ಟಿಯಿಂದಾಗಿ ಜಿಲ್ಲೆಯಾದ್ಯಂತ ಒಟ್ಟು 2,568 ಮನೆಗಳಿಗೆ ಹಾನಿಯಾಗಿದ್ದು, 2442.17 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ 874 ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಸುಮಾರು 831.17 ಲಕ್ಷ ರೂ ನಷ್ಟವಾಗಿದೆ. ಹಾಗೆಯೇ ಭಾಗಶ: 1,694 ಮನೆಗಳು ಹಾನಿಯಾಗಿದ್ದು, 1,611 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. 

ಮಳೆ ಹಾನಿಯಿಂದಾಗಿ ಜಿಲ್ಲೆಯಲ್ಲಿ 22,760 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾದ ಭತ್ತ ಹಾಗೂ ಮೆಕ್ಕೆಜೋಳ ಬೆಳೆ ಹಾನಿಯಾಗಿದ್ದು ಶೇ.33 ಕ್ಕಿಂತ ಹೆಚ್ಚು 7,877 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ. 348 ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಯಲ್ಲಿ ಹೂಳು ತುಂಬಿಕೊಂಡಿದ್ದು, ಅಂದಾಜು ನಷ್ಟದ ಮೊತ್ತವು 882 ಲಕ್ಷಗಳಾಗಿದೆ ಎಂದು ಅಂದಾಜು ಮಾಡಲಾಗಿದೆ. 

ಜಿಲ್ಲೆಯಾದ್ಯಂತ 160 ಗ್ರಾಮಗಳು ಅತಿವೃಷ್ಟಿಯಿಂದಾಗಿ ತೀವ್ರ ರೀತಿಯಲ್ಲಿ ತೋಟಗಾರಿಕಾ ಬೆಳೆ ನಷ್ಟಕ್ಕೆ ತುತ್ತಾಗಿದ್ದು, ಶೇ.33 ಕ್ಕೂ ಹೆಚ್ಚಿನ ಪ್ರಮಾಣದ ಕಾಫಿ 41,526 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದ್ದು, 38,600 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. 

ಕಾಳುಮೆಣಸು 8,690 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಸುಮಾರು 5,350 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. ಅಡಿಕೆ ಬೆಳೆಗೆ ಸಂಬಂಧಿಸಿದಂತೆ 1,804 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆ ಹಾನಿಯಾಗಿದ್ದು, ಸುಮಾರು 2,256 ಲಕ್ಷ ರೂ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. 

784 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆ ಹಾನಿಯಾಗಿದ್ದು, ಸುಮಾರು 548 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. 559 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆ ಹಾನಿಯಾಗಿದ್ದು, ಸುಮಾರು 71 ಲಕ್ಷ ರೂ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. 

ಮೊಬೈಲ್ ತಂತ್ರಾಂಶದ ಮುಖಾಂತರ 27 ಗ್ರಾಮಗಳಲ್ಲಿ ಒಟ್ಟು 458 ಕಾಫಿ ಬೆಳೆಗಾರರನ್ನು ಒಳಗೊಂಡು ಒಟ್ಟು 439.94 ಹೆಕ್ಟೇರ್ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಸಿ 97.36 ಹೆಕ್ಟೇರ್ ಪ್ರದೇಶವು ಶೇ.33 ಕ್ಕಿಂತ ಕಡಿಮೆ ಹಾನಿಯಾಗಿದ್ದು, 342.58 ಹೆಕ್ಟೇರ್ ಪ್ರದೇಶವು ಶೇ.33 ಕ್ಕಿಂತ ಹೆಚ್ಚು ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ. 27 ಗ್ರಾಮಗಳಲ್ಲಿ ತೋಟಗಾರಿಕಾ ಬೆಳೆಗಳಾದ ಕಾಳುಮೆಣಸು, ಅಡಿಕೆ, ಶುಂಠಿ, ಬಾಳೆಗಳ ಸರ್ವೆ ಕಾರ್ಯ ನಡೆಸಿದ್ದು, ಒಟ್ಟು 540 ಬೆಳೆಗಾರರನ್ನು ಒಳಗೊಂಡು ಒಟ್ಟು 544.88 ಹೆಕ್ಟೇರ್ ಪ್ರದೇಶದಲ್ಲಿ ಸರ್ವೆ ಕಾರ್ಯ ನಡೆಸಿ 15.90 ಹೆಕ್ಟೇರ್ ಪ್ರದೇಶವು ಶೇ.33 ಕ್ಕಿಂತ ಕಡಿಮೆ ಹಾನಿಯಾಗಿದೆ ಎಂದು ಹೇಳಲಾಗಿದೆ. ಹಾಗೆಯೇ 528.95 ಹೆಕ್ಟೇರ್ ಪ್ರದೇಶದಲ್ಲಿ ಶೇ.33 ಕ್ಕಿಂತ ಹೆಚ್ಚು ಹಾನಿಯಾಗಿದೆ ಎದು ಅಂದಾಜು ಮಾಡಲಾಗಿದೆ. 5 ಗ್ರಾಮಗಳಲ್ಲಿ ಒಟ್ಟು 25 ಬೆಳೆಗಾರರನ್ನೊಳಗೊಂಡು ಒಟ್ಟು 11 ಹೆಕ್ಟೇರ್ ಪ್ರದೇಶದಲ್ಲಿ ಏಲಕ್ಕಿ ಬೆಳೆ ಹಾನಿಯಾಗಿದ್ದು, ಶೇ.33 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. 

ರಾಷ್ಟ್ರೀಯ ಹೆದ್ದಾರಿ: ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 275 ರ ಒಟ್ಟು 60.71 ಕಿ.ಮೀ ರಸ್ತೆಯಲ್ಲಿ 25.314 ಕಿ.ಮೀ ರಸ್ತೆ ಹಾನಿಯಾಗಿದ್ದು, ಸುಮಾರು 53,100 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. ನಗರ ವ್ಯಾಪ್ತಿಯ 74 ಕಿ.ಮೀ ರಸ್ತೆ ಹಾನಿಯಾಗಿದ್ದು ಅಂದಾಜು ನಷ್ಟ 750 ಲಕ್ಷಗಳಾಗಿರುತ್ತವೆ.  

ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವಂತಹ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ 805.29 ಕಿ.ಮೀ ರಸ್ತೆ ಹಾನಿಯಾಗಿದ್ದು, 44,648.69 ಲಕ್ಷ ರೂ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಗ್ರಾಮೀಣ ರಸ್ತೆ 1,792.43 ಕಿ.ಮೀ ಹಾನಿಯಾಗಿದ್ದು, ಸುಮಾರು 59,185.48 ಲಕ್ಷ ರೂ ನಷ್ಟ ಉಂಟಾಗಿರುತ್ತದೆ ಎಂದು ಅಂದಾಜು ಮಾಡಲಾಗಿದೆ. 

ಮಳೆ ಹಾನಿಯಿಂದಾಗಿ ಜಿಲ್ಲೆಯಲ್ಲಿ 406 ಸರ್ಕಾರಿ ಕಟ್ಟಡಗಳಿಗೆ ತೀವ್ರ ಹಾನಿ ಉಂಟಾಗಿದ್ದು, ಅಂದಾಜು 1,763.48 ಲಕ್ಷ ರೂ ನಷ್ಟ ಉಂಟಾಗಿದೆ. 84 ಶಾಲೆಗಳಿಗೆ ಹಾನಿಯಾಗಿದ್ದು, ಅಂದಾಜು 231.84 ಲಕ್ಷ ನಷ್ಟ ಉಂಟಾಗಿದೆ. 63 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳು ಹಾನಿಯಾಗಿದ್ದು, ಸುಮಾರು 498 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ.  

160 ಅಂಗನವಾಡಿ ಕಟ್ಟಡಗಳು ಹಾನಿಯಾಗಿದ್ದು, ಸುಮಾರು 800 ಲಕ್ಷ ರೂ ನಷ್ಟವಾಗಿದೆ. 99 ಪಂಚಾಯತ್ ಕಟ್ಟಡಗಳಿಗೆ ಹಾನಿಯಾಗಿದ್ದು, ಸುಮಾರು 233.64 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. 

ಮಳೆ ಹಾನಿಯಿಂದಾಗಿ ಜಿಲ್ಲೆಯಲ್ಲಿ 2,900 ವಿದ್ಯುತ್ ಕಂಬಗಳು ಹಾನಿಯಾಗಿದ್ದು, ಎಸ್‍ಡಿಆರ್‍ಎಫ್ ಪ್ರಕಾರ 116 ಲಕ್ಷ ರೂ ನಷ್ಟ ಉಂಟಾಗಿದೆ. 657 ವಿದ್ಯುತ್ ಟ್ರಾನ್ಸ್ ಫಾರ್ಮ್‍ಗಳು ಹಾನಿಯಾಗಿದ್ದು ಎಸ್‍ಡಿಆರ್‍ಎಫ್ ಪ್ರಕಾರ 657 ಲಕ್ಷ ರೂ ನಷ್ಟ ಉಂಟಾಗಿದೆ. ಒಟ್ಟು 20.88 ಕಿ.ಮೀ ವ್ಯಾಪ್ತಿಯಲ್ಲಿ ವಿದ್ಯುತ್ ಪ್ರಸಾರಣಕ್ಕೆ ಹಾನಿ ಉಂಟಾಗಿದ್ದು, ಎಸ್‍ಡಿಆರ್‍ಎಫ್ ಪ್ರಕಾರ 10.44 ಲಕ್ಷ ರೂ ನಷ್ಟ ಉಂಟಾಗಿದೆ. ಒಟ್ಟಾರೆ ವಿದ್ಯುತ್ ಇಲಾಖೆ ವ್ಯಾಪ್ತಿಯ ಹಾನಿ ಸಂಬಂಧಿದಂತೆ ಸುಮಾರು 783.44 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. 

ಜಿಲ್ಲೆಯಲ್ಲಿ ಒಟ್ಟು 140 ನೀರಾವರಿ ಕಾಲುವೆಗಳು ಹಾನಿಗೊಳಗಾಗಿದ್ದು, 3,900 ಲಕ್ಷ ರೂ ನಷ್ಟ ಉಂಟಾಗಿದೆ ಎಂದು ಅಂದಾಜು ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News