ಆದರ್ಶ ವಧು ಬೇಕೇ ? ಬರ್ಕತುಲ್ಲಾ ವಿವಿಗೆ ಬನ್ನಿ...

Update: 2018-09-15 03:44 GMT

ಭೋಪಾಲ್, ಸೆ. 15: ನಿಮಗೆ ಸಂಸ್ಕಾರವಂತ ಆದರ್ಶ ವಧು ಬೇಕೇ ? ಭೋಪಾಲ್‌ನ ಬರ್ಕತುಲ್ಲಾ ವಿವಿಗೆ ಬನ್ನಿ.

ಬಿಸಿಎ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಯನ್ನು ಹಿಂದಿಯಲ್ಲಿ ಬರೆಯಬೇಕೇ ಅಥವಾ ಇಂಗ್ಲಿಷ್‌ನಲ್ಲಿ ಬರೆಯಬೇಕೇ ಎಂಬ ನಿರ್ಧಾರಕ್ಕೆ ಬರಲು ವಿಫಲವಾಗಿರುವ ಈ ವಿಶ್ವವಿದ್ಯಾನಿಲಯ "ಆದರ್ಶ ಬಹು"ಗಳನ್ನು ರೂಪಿಸುವ ಅಲ್ಪಾವಧಿ ಕೋರ್ಸ್ ಆರಂಭಿಸಲು ನಿರ್ಧರಿಸಿದೆ.

ಇದು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದು ವಿವಿ ಹೇಳಿಕೊಂಡಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಮೂರು ತಿಂಗಳ ಈ ಕೋರ್ಸ್ ಆರಂಭಿಸಲಾಗುತ್ತದೆ.

ವಿವಾಹದ ಬಳಿಕ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವ ಬಗ್ಗೆ ಯುವತಿಯರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ ಎಂದು ಕುಲಪತಿ ಪ್ರೊ.ಡಿ.ಸಿ.ಗುಪ್ತಾ ಹೇಳಿದ್ದಾರೆ. "ವಿಶ್ವವಿದ್ಯಾನಿಲಯವಾಗಿ ನಮಗೆ ಸಾಮಾಜಿಕ ಹೊಣೆಗಾರಿಕೆಯೂ ಇದೆ. ಕೇವಲ ಶೈಕ್ಷಣಿಕ ಅಂಶಗಳ ಬಗ್ಗೆ ಮಾತ್ರ ನಾವು ಸೀಮಿತವಾಗುವಂತಿಲ್ಲ. ಕುಟುಂಬವನ್ನು ಒಟ್ಟಾಗಿ ಇಡುವ ನಿಟ್ಟಿನಲ್ಲಿ ವಧುಗಳನ್ನು ಸಜ್ಜುಗೊಳಿಸುವುದು ನಮ್ಮ ಉದ್ದೇಶ" ಎಂದು ಹೇಳಿದ್ದಾರೆ.

ಈ ಕೋರ್ಸನ್ನು ಮನಃಶಾಸ್ತ್ರ, ಸಮಾಜಶಾಸ್ತ್ರ ಮತ್ತು ಮಹಿಳಾ ಅಧ್ಯಯನ ವಿಭಾಗಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತದೆ. ಇದು ಮಹಿಳಾ ಸಬಲೀಕರಣದ ಒಂದು ಭಾಗ ಎಂದು ಅವರು ಸ್ಪಷ್ಟಪಡಿಸಿದರು.

ಪಠ್ಯಕ್ರಮದ ಬಗ್ಗೆ ಕೇಳಿದಾಗ, ಸಮಾಜಶಾಸ್ತ್ರ ಹಾಗೂ ಮನಃಶಾಸ್ತ್ರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಬೋಧಿಸಲಾಗುತ್ತದೆ. ಈ ಕೋರ್ಸ್ ಪೂರ್ಣಗೊಳಿಸಿದ ಬಳಿಕ, ಯುವತಿಯರು ಕುಟುಂಬ ವ್ಯವಸ್ಥೆಯನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಸಮರ್ಥರಾಗುತ್ತಾರೆ. ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವುದು ಈ ಕೋರ್ಸ್‌ನ ಉದ್ದೇಶ ಎಂದು ವಿವರಿಸಿದರು.

ಮೊದಲ ಬ್ಯಾಚ್‌ನಲ್ಲಿ 30 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಈ ಕೋರ್ಸ್ ಸೇರಲು ಕನಿಷ್ಟ ವಿದ್ಯಾರ್ಹತೆ ನಿಗದಿಪಡಿಸುವ ಪ್ರಕ್ರಿಯೆ ನಡೆದಿದೆ ಎಂದು ವಿವರಿಸಿದರು. ಈ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳ ಪೋಷಕರಿಂದಲೂ ಅಭಿಪ್ರಾಯ ಪಡೆಯಲು ವಿವಿ ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News