ಕೇಂದ್ರದ ಕೋಮುವಾದದಿಂದ ಅಮಾಯಕ ಮುಸ್ಲಿಮರ ಮಾರಣಹೋಮ: ಪಿಎಫ್ಐ ಮಾಜಿ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ.ಶರೀಫ್

Update: 2018-09-15 12:49 GMT

ಮೂಡಿಗೆರೆ, ಸೆ.15: ಕೇಂದ್ರ ಸರಕಾರದ ಪ್ರಾಯೋಜಿತ ಕೋಮುವಾದದಿಂದ ದೇಶದಲ್ಲಿ ಅಮಾಯಕ ಮುಸ್ಲಿಮರನ್ನು ಕಂಡ ಕಂಡಲ್ಲಿ ಹೊಡೆದು ಉರುಳಿಸಲಾಗುತ್ತಿದೆ. ಇಂತಹ ಹೀನ ಕೃತ್ಯವನ್ನು ತಡೆದು ಕೋಮುವಾದಿಗಳನ್ನು ಮಟ್ಟ ಹಾಕಲು ರಾಷ್ಟ್ರ ಮಟ್ಟದಲ್ಲಿ ಆಂದೋಲನ ರೂಪಿಸುವ ಅಗತ್ಯವಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ.ಶರೀಫ್ ಹೇಳಿದರು. 

ಅವರು ಶನಿವಾರ ಪಟ್ಟಣದ ಜಾಮಿಯಾ ಶಾದಿ ಮಹಲ್‍ನಲ್ಲಿ ಪಿಎಫ್‍ಐ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಾಲ್ಕುವರೆ ವರ್ಷದಲ್ಲಿ ಆರೆಸ್ಸೆಸ್ ನಿಯಂತ್ರಣದಲ್ಲೇ ಸರ್ವಾಧಿಕಾರಿ ಆಡಳಿತ ನಡೆಯುತ್ತಿದೆ. ಅಭಿವೃದ್ಧಿಗಿಂತ ಕೋಮುವಾದ ಮತ್ತು ಅಮಾಯಕರ ಮೇಲೆ ದೌರ್ಜನ್ಯಕ್ಕೆ ಕೇಂದ್ರ ಸರಕಾರದ ಆಡಳಿತ ಹೆಚ್ಚಿನ ಮಹತ್ವ ನೀಡುತ್ತಿದೆ. ದಬ್ಬಾಳಿಕೆ, ಜನ ವಿರೋಧಿ ನೀತಿಯಿಂದಲೇ ಪ್ರಖ್ಯಾತಿ ಹೊಂದಿರುವ ಸರಕಾರದಿಂದ ಅಮಾಯಕರು ರಕ್ಷಣೆ ಕೇಳಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು. 

2019ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯುವ ಕೆಲಸ ಆಗಬೇಕಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬಂದುಬಿಟ್ಟರೆ ಕೋಮುವಾದದ ಬ್ರಹ್ಮಾಸ್ತ್ರದ ರೂಪ ಇನ್ನಷ್ಟು ಉಗ್ರ ರೂಪ ತಾಳಲಿದೆ. ಅದಕ್ಕೆ ಕಡಿವಾಣ ಹಾಕಲು ಪಿಎಫ್‍ಐ ಸದಾ ಸಿದ್ದವಿದೆ ಎಂದ ಅವರು, ರಾಷ್ಟ್ರೀಯ ವಿಪತ್ತಿನ ವೇಳೆ ಕಳೆದ ವರ್ಷ ತಮಿಳುನಾಡು, ಈ ಬಾರಿ ಕೇರಳ, ಕೊಡಗು, ಮಂಗಳೂರಿನಲ್ಲಿ ಆರೆಸ್ಸೆಸ್ ನವರು ನೆಪ ಮಾತ್ರಕ್ಕೆ ಬಂದು ಅಲ್ಲಿಯೂ ತಮ್ಮ ಕೋಮುವಾದದ ಬೇಳೆ ಬೇಯಿಸಲು ನೋಡಿದ್ದಾರಷ್ಟೆ. ಪಿಎಫ್‍ಐ ಕಾರ್ಯಕರ್ತರು ಜಾತಿ, ಮತ, ಬೇಧ ನೋಡದೇ ಎಲ್ಲಾ ವರ್ಗದವರನ್ನು ವಿಪತ್ತಿನಿಂದ ರಕ್ಷಿಸಿ ಪುನರ್ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. ಹಾಗಾಗಿ ದೇಶದ ಜನರು ಪಿಎಫ್‍ಐಯನ್ನು ಮೆಚ್ಚಿದ್ದಾರೆಂದು ಹೇಳಿದರು.

ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಝೀಜ್, ಪಿಎಫ್‍ಐ ತಾಲೂಕು ಅಧ್ಯಕ್ಷ ಸಿಖಂದರ್ ಪಾಷಾ, ಕಾರ್ಯದರ್ಶಿ ಹಸೈನಾರ್, ಮುಖಂಡರಾದ ಅಂಜದ್, ಕೆ.ಪಿ.ಅಲೀ, ಅತೀಫ್, ಎ.ಎಂ.ಶರೀಫ್, ಫಯಾಜ್, ತೌಸೀಫ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News