ರಾಜ್ಯದಲ್ಲಿ ಅವಧಿಗೂ ಮುನ್ನವೇ ಬೆವರಿಳಿಸುತ್ತಿರುವ ಬಿಸಿಲು

Update: 2018-09-15 14:30 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.15: ರಾಜ್ಯದಲ್ಲಿ ಮಳೆಗಾಲ ಮುಗಿಯುವುದಕ್ಕಿಂತ ಮೊದಲೇ ಬೇಸಿಗೆಯನ್ನು ಮೀರಿಸುವ ರೀತಿಯಲ್ಲಿ ಬಿಸಿಲು ಕಾಯುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಅಂದಾಜು 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ರಾಜ್ಯದ ಬಹುತೇಕ ಕಡೆ ಭಾಗಶಃ ಮೋಡ ಕವಿದ ವಾತಾವರಣ ಸೃಷ್ಟಿಯಾಗುತ್ತಿದೆ. ಆದರೆ, ಕೆಲ ಪ್ರದೇಶಗಳಲ್ಲಿ ಒಣಗಿ ಬಾಯ್ತೆರೆದು ನಿಂತಿರುವ ಭೂಮಿಗೆ ತುಂತುರು ಮಳೆ ಬೀಳುತ್ತಿರುವುದರಿಂದ ಮತ್ತಷ್ಟು ಧಗೆ ಹೆಚ್ಚುತ್ತಿದೆ. ಬಳ್ಳಾರಿ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ 37-38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಜನಜೀವನವನ್ನು ಹೈರಾಣಾಗಿಸಿದೆ. ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಮತ್ತು ಸುತ್ತಮುತ್ತಲ ರಾಜ್ಯಗಳಲ್ಲಿ ಉಂಟಾಗಿರುವ ತೀವ್ರ ಮಳೆ ಕೊರತೆಯೇ ಬಿಸಿಲ ಬೇಗೆ ಹೆಚ್ಚಲು ಪ್ರಮುಖ ಕಾರಣ ಎಂದು ಅಂದಾಜಿಸಲಾಗಿದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಕರಾವಳಿ ಭಾಗದಿಂದ ತೇವಾಂಶಯುಕ್ತ ಗಾಳಿ ಬೀಸುತ್ತದೆ. ಆದರೆ, ಈ ಬಾರಿ ಮಳೆ ಕೊರತೆಯಿಂದ ಗಾಳಿಯಲ್ಲಿ ತೇವಾಂಶ ಕಂಡುಬಂದಿಲ್ಲ. ಉತ್ತರದ ಕಡೆಯಿಂದ ಬೀಸುತ್ತಿರುವ ಬಿಸಿಗಾಳಿ ತಾಪಮಾನ ಮತ್ತಷ್ಟು ಹೆಚ್ಚಲು ಕಾರಣವಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಾಡಿಕೆಗಿಂತ ಅಧಿಕ ದಾಖಲು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ಅವಧಿಯಲ್ಲಿ 26-27 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬರುತ್ತದೆ. ಆದರೆ, ಅದು ಈಗ 37 ಡಿಗ್ರಿ ಸೆಲ್ಸಿಯನ್ ಗರಿಷ್ಠ ತಾಪಮಾನದವರೆಗೂ ಕಂಡುಬರುತ್ತಿದೆ. ಅಲ್ಲದೆ, ಹಾಸನದಲ್ಲಿ 33.8 ಡಿಗ್ರಿ ಸೆಲ್ಸಿಯಸ್(ವಾಡಿಕೆಗಿಂತ 7 ಡಿಗ್ರಿ ಸೆ.ಅಧಿಕ), ಮೈಸೂರಿನಲ್ಲಿ 33.9 ಡಿಗ್ರಿ ಸೆಲ್ಸಿಯಸ್(ವಾಡಿಕೆಗಿಂತ 4.4 ಡಿಗ್ರಿ ಸೆ.ಅಧಿಕ) ತಾಪಮಾನ ದಾಖಲಾಗಿದೆ.

ಮಲೆನಾಡು ಹಾಗೂ ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿದ್ದರಿಂದ ರಾಜ್ಯದ ಅಣೆಕಟ್ಟುಗಳು ಭರ್ತಿಯಾಗಿವೆ. ಆದರೆ ಬಿಸಿಲ ಝುಳ ಏರುತ್ತಿರುವುದರಿಂದ ನೀರು ಆವಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.

ಇನ್ನೆರಡು ದಿನ ಮಳೆ: ರಾಜ್ಯಾದ್ಯಂತ ಸೆ.16 ರಿಂದ 18 ರವರೆಗೂ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ದಕ್ಷಿಣ ಒಳನಾಡು ಹಾಗೂ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಳೆದೊಂದು ವಾರದಿಂದ ಆಗಾಗ ತುಂತುರು, ಸಾಧಾರಣ(1.5 ಸೆಂ.ಮಿ.ನಿಂದ 6.4 ಸೆಂ.ಮಿ.)ಮಳೆಯಾಗುತ್ತಿದೆ. ಆದರೆ ಉತ್ತರ ಕರ್ನಾಟಕ ಹಾಗೂ ಕರಾವಳಿಯಲ್ಲಿ ಒಣಹವೆ ಮುಂದುವರಿದಿದೆ.

ರಾಜ್ಯದ ತಾಪಮಾನ(ಡಿಗ್ರಿ ಸೆ.ನಲ್ಲಿ)

ಬೆಂಗಳೂರು-ಕನಿಷ್ಠ 22.2 ಗರಿಷ್ಠ: 30.3

ಮೈಸೂರು-ಕನಿಷ್ಠ: 18.6 ಗರಿಷ್ಠ: 33.9

ಬೆಳಗಾವಿ-ಕನಿಷ್ಠ: 16.6 ಗರಿಷ್ಠ: 30.4

ಹುಬ್ಬಳ್ಳಿ-ಕನಿಷ್ಠ: 16.6 ಗರಿಷ್ಠ: 30.5

ಮಂಗಳೂರು-ಕನಿಷ್ಠ: 22.8 ಗರಿಷ್ಠ: 31.2

ಎಲ್ಲೆಲ್ಲಿ ಎಷ್ಟು ಬಿಸಿಲು

ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ-31 ಡಿ.ಸೆ

ಬೀದರ್, ಬಾಗಲಕೋಟೆ, ಚಿಕ್ಕಬಳ್ಳಾಪುರ-32 ಡಿ.ಸೆ.

ಗದಗ, ಹಾಸನ, ಮಂಡ್ಯ, ಮೈಸೂರು-33 ಡಿ.ಸೆ.

ವಿಜಯಪುರ, ಕಲಬುರಗಿ-34 ಡಿ.ಸೆ.

ಕೊಪ್ಪಳ, ರಾಯಚೂರು, ಬಳ್ಳಾರಿ-35 ಡಿ.ಸೆ.

ಚಿಕ್ಕಮಗಳೂರು-37 ಡಿ.ಸೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News