ತಂತ್ರಜ್ಞಾನಕ್ಕೆ ತಕ್ಕಂತೆ ಕಾನೂನು ಶಿಕ್ಷಣ ಬದಲಾಗಬೇಕು: ರಾಷ್ಟ್ರಪತಿ ರಾಮನಾಥ್‌ ಕೋವಿಂದ್

Update: 2018-09-15 15:26 GMT

ಬೆಳಗಾವಿ, ಸೆ.15: ಜಗತ್ತಿನಲ್ಲಿ ತೀವ್ರಗತಿಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಕಾನೂನು ಶಿಕ್ಷಣ ಹಾಗೂ ವೃತ್ತಿಯನ್ನು ಬದಲಾಯಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾನೂನು ಶಿಕ್ಷಣವನ್ನು ಬೋಧಿಸುವ ಶಿಕ್ಷಣ ಸಂಸ್ಥೆಗಳು ಹಾಗೂ ಕಾನೂನು ಅಧ್ಯಯನ ಮಾಡುತ್ತಿರುವ ಯುವ ಸಮುದಾಯ ಗಮನಹರಿಸಬೇಕು ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಕರೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಕರ್ನಾಟಕ ಲಾ ಸೊಸೈಟಿ ಮತ್ತು ರಾಜಾ ಲಖಮಗೌಡ ಕಾನೂನು ಕಾಲೇಜಿನ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 21ನೇ ಶತಮಾನದ ಅಗತ್ಯಕ್ಕೆ ತಕ್ಕಂತೆ ಕಾನೂನು ಶಿಕ್ಷಣ ಸಂಸ್ಥೆಗಳು ಹಾಗೂ ಸರಕಾರಗಳು ಪರಸ್ಪರ ಸಮನ್ವಯದೊಂದಿಗೆ ಕಾನೂನು ಶಿಕ್ಷಣ ಹಾಗೂ ವೃತ್ತಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಲು ಮುಂದಾಗಬೇಕು. ಕಾನೂನು ಶಿಕ್ಷಣ ಅಥವಾ ವಕೀಲಿ ವೃತ್ತಿಯು ಇತರ ವೃತ್ತಿಗಳಂತಲ್ಲ. ಅದೊಂದು ಉತ್ಸಾಹ ಇದ್ದ ಹಾಗೆ ಎಂದು ಅವರು ಹೇಳಿದರು.

ರಾಷ್ಟ್ರಪಿತ ಮಹಾತ್ಮಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಕಾನೂನು ಪದವೀಧರರಾಗಿದ್ದರು. ಈ ಇಬ್ಬರು ಮಹನೀಯರು ನಮ್ಮ ದೇಶಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರು ಸತ್ಯದ ಅನ್ವೇಷಕರಂತೆ ಕಾರ್ಯನಿರ್ವಹಿಸಬೇಕಿದೆ ಎಂದು ಅವರು ಹೇಳಿದರು.

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪತ್ ಮಿಶ್ರಾ ಮಾತನಾಡಿ, ಯುವ ಸಮೂಹವು ಜ್ಞಾನಾರ್ಜನೆಯ ಉದ್ದೇಶದಿಂದ ಅಧ್ಯಯನಶೀಲರಾಗಿರಬೇಕು. ಅದೇ ರೀತಿ ಹಿರಿಯರು ಯುವ ಸಮುದಾಯವನ್ನು ನಿರ್ಲಕ್ಷಿಸದೆ, ತಮ್ಮ ಅನುಭವವವನ್ನು ಅವರೊಂದಿಗೆ ಹಂಚಿಕೊಂಡು, ಅವರಿಂದ ಪ್ರಸ್ತುತತೆಯನ್ನು ಕಲಿಯಬೇಕು. ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿಯು ಸಾಮಾಜಿಕ ಇಂಜಿನಿಯರ್‌ಗಳಿದ್ದಂತೆ ಎಂದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಬೆಳಗಾವಿ ಜಿಲ್ಲೆಯು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ಸಂಸ್ಕೃತಿಯ ಮಿಶ್ರಣವಾಗಿದೆ. ಸ್ವಾತಂತ್ರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಈ ಜಿಲ್ಲೆಯು ರಾಣಿ ಚನ್ನಮ್ಮ, ಸಂಗೊಳ್ಳಿರಾಯಣ್ಣ, ಗಂಗಾಧರರಾವ್ ದೇಶಪಾಂಡೆ ಸೇರಿದಂತೆ ಇನ್ನಿತರ ಸ್ವಾತಂತ್ರ ಹೋರಾಟಗಾರ ಕರ್ಮಭೂಮಿಯಾಗಿದೆ ಎಂದರು.

1924ರಲ್ಲಿ ಬೆಳಗಾವಿಯಲ್ಲಿ ನಡೆದ 39ನೆ ಕಾಂಗ್ರೆಸ್ ಮಹಾ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮಗಾಂಧಿ ವಹಿಸಿದ್ದರು. ಈ ಜಿಲ್ಲೆಯು ತನ್ನ ರಾಜಕೀಯ ಮತ್ತು ಸಾಂಸ್ಕೃತಿಕ ವೈಶಿಷ್ಟತೆಯಿಂದ ದೇಶದ ಗಮನ ಸೆಳೆದಿದೆ. ಬೆಳಗಾವಿ ಜಿಲ್ಲೆಯಿಂದಲೆ 2006 ರಲ್ಲಿ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಆರಂಭಿಸಿದ್ದೆ ಎಂದು ಅವರು ಹೇಳಿದರು.

ಈ ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 19 ಬಾರಿ ಬೆಳಗಾವಿಗೆ ಭೇಟಿ ನೀಡಿದ್ದೆ. ಇಲ್ಲಿಯೇ ವಿಧಾನಸಭೆ ಕಲಾಪಗಳನ್ನು ಆರಂಭಿಸಿದ್ದೆ. ಕನ್ನಡ ಭವನಕ್ಕೂ ಶಂಕುಸ್ಥಾಪನೆ ನೆರವೇರಿಸಿದ್ದೆ. ಬೆಳಗಾವಿ ಜಿಲ್ಲೆಯೊಂದಿಗೆ ಉತ್ತಮ ಒಡನಾಟವನ್ನು ಹೊಂದಿದ್ದು, ಅವಿನಾಭಾವ ಸಂಬಂಧವನ್ನು ಹೊಂದಿದ್ದೇನೆ ಎಂದು ಮುಖ್ಯಮಂತ್ರಿ ಸ್ಮರಿಸಿದರು.

ಬೆಳಗಾವಿಯಲ್ಲಿ ವಿಧಾನಸಭೆಯ ಕಲಾಪಗಳು ನಡೆಬೇಕೆಂಬ ಉದ್ದೇಶದಿಂದ ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 2006-07ರಲ್ಲಿ ಪ್ರಥಮ ಬಾರಿಗೆ ಇಲ್ಲಿ ಕಲಾಪವನ್ನು ಏರ್ಪಡಿಸಿದ್ದೆ. ಸುವರ್ಣ ವಿಧಾನಸೌಧ ವರ್ಷದ 365 ದಿನವೂ ಕಾರ್ಯನಿರ್ವಹಿಸಬೇಕೆಂದು ನಾನು ಆಶಿಸುತ್ತಿದ್ದೇನೆ. ಈ ಬಗ್ಗೆ ಶೀಘ್ರವೇ ಸರಕಾರದ ಎಲ್ಲ ಪ್ರತಿನಿಧಿಗಳೊಂದಿಗೆ ಚರ್ಚಿಸಿ, ಇಲಾಖೆಗಳ ಸ್ಥಳಾಂತರ ಮಾಡಲಾಗುವುದೆಂದು ಕುಮಾರಸ್ವಾಮಿ ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಮೋಹನ್ ಎಂ.ಶಾಂತನಗೌಡರ್, ಎಸ್.ಅಬ್ದುಲ್ ನಝೀರ್, ವಿನೀತ್ ಸರನ್, ಭಾರತದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಕೆಎಲ್‌ಎಸ್ ಅಧ್ಯಕ್ಷ ಅನಂತ್‌ ಮಂಡಗಿ ಸೇರಿದಂತೆ ಇನ್ನಿತರರು ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News