ಕೊಪ್ಪ: ಶಾಲೆಯಲ್ಲಿ ಬಿಸಿ ಹಾಲು ಸೇವಿಸಿ 17 ವಿದ್ಯಾರ್ಥಿಗಳು ಅಸ್ವಸ್ಥ

Update: 2018-09-15 16:17 GMT

ಕೊಪ್ಪ, ಸೆ.15: ಶಾಲೆಯಲ್ಲಿ ಕೊಟ್ಟ ಬಿಸಿ ಹಾಲು ಕುಡಿದ ಮಕ್ಕಳು ತೀವ್ರವಾಗಿ ಅಸ್ವಸ್ಥರಾದ ಘಟನೆ ಶನಿವಾರ ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ವರದಿಯಾಗಿದ್ದು, ಅಸ್ವಸ್ಥರಾದ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿದ್ದರಿಂದ ಪ್ರಾಣಾಪಾಯಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ತಾಲೂಕಿನ ಹರಿಹರಪುರ ಸಮೀಪ ನಿಲುವಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೀಡಿದ ಹಾಲನ್ನು ಕುಡಿದ 17 ವಿದ್ಯಾರ್ಥಿಗಳು ಮತ್ತು ದೈಹಿಕ ಶಿಕ್ಷಕ ಮೋಹನ್ ಗೌಡ ವಾಂತಿ ಮಾಡಿಕೊಂಡು ಅಸ್ವಸ್ಥರಾದರೆಂದು ತಿಳಿದು ಬಂದಿದ್ದು, ತಕ್ಷಣ ಅಸ್ವಸ್ಥ ಮಕ್ಕಳು ಹಾಗೂ ಶಿಕ್ಷಕರನ್ನು ಹರಿಹರಪುರ ಮತ್ತು ಕೊಪ್ಪ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಅಡುಗೆ ಸಿಬ್ಬಂದಿ ಶನಿವಾರ ಬೆಳಗ್ಗೆ 11ಕ್ಕೆ ಹಾಲಿಗೆ ಸಕ್ಕರೆಯ ಬದಲು ಕೃಷಿಗೆ ಸಿಂಪರಿಸುವ ಯೂರಿಯ ಗೊಬ್ಬರವನ್ನು ಹಾಲಿಗೆ ಮಿಶ್ರಣ ಮಾಡಿದ್ದರಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಘಟನೆ ಸಂಬಂಧ ಹರಿಹರಪುರ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಬಿಸಿಯೂಟ ಅಡುಗೆ ಸಿಬ್ಬಂದಿ ಯಶೋಧ, ಶಾರದಾ ಮತ್ತು ಗುಲಾಬಿ ಎಂಬುವರನ್ನು ಪೊಲಿಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ. ಚಿಕಿತ್ಸೆಗೆ ದಾಖಲಾಗಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಂಜೆ ವೇಳೆಗೆ ಗುಣಮುಖರಾಗಿ ಪೋಷಕರೊಂದಿಗೆ ಮನೆಗೆ ತೆರಳಿದ್ದಾರೆಂದು ತಿಳಿದು ಬಂದಿದೆ.

ಸುದ್ಧಿ ತಿಳಿದ ತಕ್ಷಣ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಶಾಸಕ ಡಿ.ಎನ್. ಜೀವರಾಜ್, ಜಿ.ಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಜಿ.ಪಂ ಸದಸ್ಯ ಎಸ್.ಎನ್ ರಾಮಸ್ವಾಮಿ, ತಾ.ಪಂ.ಸದಸ್ಯ ಪ್ರವೀಣ್ ಕುಮಾರ್, ಬಿಇಓ ಗಣಪತಿ, ತಹಶೀಲ್ದಾರ್ ತನುಜಾ ಸವದತ್ತಿ ಅಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ.

ಅಡುಗೆ ಸಿಬ್ಬಂದಿಯೊಂದಿಗೆ ಶಾಲೆಯ ಶಿಕ್ಷಕರ ಬೇಜವಾಬ್ದಾರಿ ಘಟನೆಯಲ್ಲಿ ಎದ್ದು ಕಾಣುತ್ತಿದೆ. ಘಟನೆ ಸಂಬಂಧ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಸೂಕ್ತ ತನಿಖೆಯ ಬಳಿಕ ಘಟನೆ ಬಗ್ಗೆ ಸಮಗ್ರ ಮಾಹಿತಿ ಹೊರಬೀಳಲಿದೆ. ವಿದ್ಯಾರ್ಥಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಪೋಷಕರು ಹೆದರುವ ಅಗತ್ಯವಿಲ್ಲ.
- ಟಿ.ಡಿ.ರಾಜೇಗೌಡ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News