ರಾಜ್ಯ ಸರಕಾರ ಉರುಳಿಸಲು ಬಿಜೆಪಿಯಿಂದ ವ್ಯರ್ಥ ಕಸರತ್ತು: ಮಾಜಿ ಸಚಿವ ಆಂಜನೇಯ

Update: 2018-09-15 16:36 GMT

ಹೊಸಪೇಟೆ, ಸೆ. 15: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪ್ರಜಾಸತ್ತಾತ್ಮಕವಾಗಿ ರಚನೆಯಾಗಿದ್ದು, ಅದು ಕೆಲಸ ನಿರ್ವಹಿಸಲು ಬಿಡಬೇಕು. ಆದರೆ, ಬಿಜೆಪಿ ಸರಕಾರ ಉರುಳಿಸಲು ವ್ಯರ್ಥ ಕಸರತ್ತು ನಡೆಸಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ದೂರಿದ್ದಾರೆ.

ಶನಿವಾರ ತಾಲೂಕಿನ ಕೊಂಡನಾಯಕನಹಳ್ಳಿ ಸಮೀಪದ ಮಾತಂಗ ಸೇವಾಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೇ ಬಿಜೆಪಿಯವರು ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟಿದ್ದಾರೆಂದು ಟೀಕಿಸಿದರು.

2008ರಲ್ಲಿ ನರಿ, ನಾಯಿ, ಕೋಣಗಳಂತೆ ವಿವಿಧ ಪಕ್ಷದ ಶಾಸಕರನ್ನು ಖರೀದಿಸಿ ಸರಕಾರ ರಚಿಸಿದ್ದರು. ಆಗ ಏನೆಲ್ಲ ಮಾಡಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಒಂದು ಸಲ ಅಧಿಕಾರದ ರುಚಿ ನೋಡಿರುವ ಅವರು ಅದನ್ನು ಪಡೆಯಲು ಮೇಲಿಂದ ಮೇಲೆ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು.

ಮೈತ್ರಿ ಸರಕಾರ ಮುಂದುವರಿಯುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಜಾರಕಿಹೋಳಿ ಸಹೋದರರೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸರಕಾರಕ್ಕೆ ಯಾವುದೇ ತೊಡಕಿಲ್ಲ. ಐದು ವರ್ಷ ಕಾರ್ಯ ನಿರ್ವಹಿಸಲಿದ್ದು, ಸರಕಾರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಲಿದೆ ಎಂದರು.

ಈಗಾಗಲೇ ರಾಜ್ಯ ನೀಡಿದ್ದ ಭರವಸೆಯಂತೆ ರೈತರ ಸಾಲಮನ್ನಾ ಮಾಡಿದೆ. ಪ್ರವಾಹದಿಂದ ಕೊಡಗಿನಲ್ಲಿ ಅಪಾರ ಸಾವು ನೋವು ಸಂಭವಿಸಿದೆ. ಅಲ್ಲಿನ ಜನ ಸಂಕಷ್ಟದಲ್ಲಿದ್ದಾರೆ. ಬಿಜೆಪಿಯವರು ರಾಜಕೀಯ ಮಾಡುವುದನ್ನು ಬಿಟ್ಟು ಅಲ್ಲಿನವರ ಬದುಕು ಕಟ್ಟಿಕೊಡಲು ಕೈಜೋಡಿಸಬೇಕು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News