×
Ad

ಬರೆಯುವವರು ಸ್ವವಿಮರ್ಶೆ ಮಾಡಿಕೊಂಡರೆ ಮಾನವೀಯ ವ್ಯವಸ್ಥೆ ನಿರ್ಮಿಸಲು ಸಾಧ್ಯ: ಡಾ.ಅರವಿಂದ ಮಾಲಗತ್ತಿ

Update: 2018-09-15 22:37 IST

ಮೈಸೂರು,ಸೆ.15: ಬರೆಯುವವರು ಸ್ವವಿಮರ್ಶೆ ಮಾಡಿಕೊಂಡರೆ ಮಾನವೀಯ ವ್ಯವಸ್ಥೆ ನಿರ್ಮಿಸಲು ಸಾಧ್ಯವಿದೆ ಎಂದು ಸಂಸ್ಕೃತಿ ಚಿಂತಕ ಡಾ.ಅರವಿಂದ ಮಾಲಗತ್ತಿ ತಿಳಿಸಿದರು,

ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಕೇಂದ್ರದಲ್ಲಿ ಮಹಿಮಾ ಪ್ರಕಾಶನ ಆಯೋಜಿಸಿದ್ದ ಲೇಖಕ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಡಾ.ಎಂ.ಆರ್.ರವಿ ಅವರ ಜೀವನ ಪ್ರೀತಿ ಕೃತಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

ಡಾ.ಎಂ.ಆರ್.ರವಿ ಅವರು ಪ್ರೀತಿಯನ್ನು ಹಂಚುವ ಕಾರ್ಯ ಮನೆಯಿಂದಾಗಬೇಕು. ಆ ನಂತರ ಅದು ತನ್ನಿಂದತಾನೇ ಎಲ್ಲೆಡೆ ಹರಡುತ್ತದೆ ಎಂಬಂತೆ ಬರವಣಿಗೆಯಲ್ಲಿ ಕೌಟುಂಬಿಕ ಸನ್ನಿವೇಶಗಳನ್ನು ತಿಳಿಸುವ ಮೂಲಕ ಸಮಾಜದಲ್ಲಿ ಉತ್ತಮ ಕಾರ್ಯಮಾಡುತ್ತಿದ್ದಾರೆ. ಅವರ ಎಲ್ಲಾ ಲೇಖನಗಳು ವಿಶೇಷತೆಯಿಂದ ಕೂಡಿದ್ದು, ಜನಪ್ರೀಯತೆ ಮತ್ತು ಜನಪರತೆಯ ನಡುವೆ ಸಮಾಜಕ್ಕೆ ಏನು ಕೊಡಬೇಕು. ಸಮಾಜಪರವಾಗಿ ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ ಎಂದರು.

ಅವರ ಜೀವನ ಪ್ರೀತಿ ಕೃತಿಯನ್ನು ಓದಿದ ಬಳಿಕ ಅವರ ಮೇಲಿನ ಗೌರವ ಹಿಮ್ಮಡಿಯಾಗಿದೆ. ಪುಸ್ತಕವನ್ನು ಓದಿದವರಿಗೆ ಅವರ ವ್ಯಕ್ತಿತ್ವ ಹಾಗೂ ಅವರ ಆಲೋಚನೆಯನ್ನು ಅರಿತು ಕೊಳ್ಳಲು ಸಾಧ್ಯವಿದೆ. ಅದಲ್ಲದೆ, ಅವರ ಚಲನಶೀಲತೆ ಹಾಗೂ ಕ್ರಿಯಾಶೀಲತೆಯನ್ನು ತಿಳಿಸುತ್ತದೆ. ಅವರ ಎಲ್ಲಾ ಲೇಖನಗಳಲ್ಲಿ 'ನನ್ನ ಪ್ರಕಾರ' ಎಂಬುದು ಮತ್ತೆ, ಮತ್ತೆ ಪುನಾವರ್ತಿತವಾಗಿರುತ್ತದೆ. ಅದು ಅವರ ಸಾಮಾಜಿಕ ಕಳಕಳಿ, ಜವಾಬ್ದಾರಿಯನ್ನು ತಿಳಿಸುವುದಾಗಿದ್ದು, ಬರವಣಿಗೆಯ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂದರು.

ಅವರು ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದರೂ, ಅವರ ಬರವಣಿಗೆಯಲ್ಲಿ ಮೈಸೂರು ಉಳಿದಿದೆ. ಇನ್ನೊಬ್ಬರ ಬದ್ಧತೆ ಕುರಿತು ಮಾತನಾಡಬೇಕಾದರೆ ಮೊದಲು ನಮ್ಮಲ್ಲಿ ಬದ್ಧತೆಯಿರಬೇಕು. ಮಾನವೀಯತೆ, ಬದ್ಧತೆ, ನಾಗರಿಕತೆ ಹಾಗೂ ಸಂಸ್ಕೃತಿಯನ್ನು ಹಾಗೂ ಶಿಕ್ಷಣದ ಕುರಿತು ಹೆಚ್ಚು ತಮ್ಮ ಲೇಖನಗಳ ಮೂಲಕ ಬೆಳಕು ಚೆಲ್ಲುವುದು ಅವರಲ್ಲಿನ ಬದ್ಧತೆಯಾಗಿದೆ ಎಂದು ಹೇಳಿದರು.

ಕೃತಿಯಲ್ಲಿ ವ್ಯಾಖ್ಯಾನ ಸ್ವರೂಪದ ನಿರೂಪಣೆ ಹೆಚ್ಚು ಸೆಳೆಯುತ್ತದೆ. ಅಧಿಕಾರಿಯಾಗಿ ಹಾಗೂ ಲೇಖಕರಾಗಿಯೂ ಸಮರ್ಥವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಎಚ್.ಎಲ್.ನಾಗೇಗೌಡ ಅವರ ಕಾರ್ಯ ಆಶ್ಚರ್ಯವನ್ನುಂಟು ಮಾಡುತ್ತದೆ. ಅಧಿಕಾರಿಯಾಗಿ ಜಾನಪದ ಸಂಸ್ಕೃತಿಯ ಉಳಿವಿಗಾಗಿ ಅವರ ಸೇವೆ ಅಪಾರವಾಗಿದೆ. ಅಧಿಕಾರಿಗಳು ಮನುಷ್ಯರಾಗಿದ್ದಾಗ ಮಾತ್ರವೇ ಉತ್ತಮ ಕಾರ್ಯವನ್ನು ಮಾಡಲು ಸಾಧ್ಯ. ಅನೇಕ ಅಧಿಕಾರಿಗಳು ಬರವಣಿಗೆಯ ಮೂಲಕ ಬದ್ಧತೆ, ನೈತಿಕತೆಯಿಂದ ಸೇವೆ ಮಾಡಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ಆ ಸಾಲಿನಲ್ಲಿ ಡಾ.ಎಂ.ಆರ್.ರವಿ ನಿಲ್ಲುತ್ತಾರೆ ಎಂದು ತಿಳಿಸಿದರು.

ವಿಶ್ರಾಂತ ಕಾನೂನು ಪ್ರಾಧ್ಯಾಪಕ ಡಾ.ಸಿ.ಕೆ.ಎನ್.ರಾಜ, ಸಂಸ್ಕೃತಿ ಚಿಂತಕಿ ಡಾ.ಧರಣಿದೇವಿ ಮಾಲಗತ್ತಿ, ಲೇಖಕ ಡಾ.ಎಂ.ಆರ್.ರವಿ, ಮಹಿಮಾ ಪ್ರಕಾಶನ ಮಾಲಕ ಕೆ.ವಿ.ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News