ಸರಕಾರಿ ಶಾಲೆ ಬಲಪಡಿಸಲು ಯೋಜನೆ ಜಾರಿ: ಸಚಿವ ಎನ್.ಮಹೇಶ್

Update: 2018-09-15 17:54 GMT

ಮಂಡ್ಯ, ಸೆ.15: ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳನ್ನು ಬಲಪಡಿಸಲು ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದ್ದಾರೆ.

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ವತಿಯಿಂದ ನಗರದ ಕಲಾಮಂದಿರದಲ್ಲಿ ಶನಿವಾರ ನಡೆದ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಪ್ರತಿಯೊಂದು ಶಾಲೆಯ ಚಟುವಟಿಕೆಗಳನ್ನು ಗಮನಿಸಿ ಅದರ ಬಗ್ಗೆ ಕ್ರಮ ಕೈಗೊಳ್ಳುವ ಹಾಗೂ ಶಿಕ್ಷಕರನ್ನು ಎಚ್ಚರಿಸುವ ಪದ್ಧತಿ ಆಂಧ್ರದಲ್ಲಿ ಜಾರಿಯಲ್ಲಿದ್ದು, ಕರ್ನಾಟಕದಲ್ಲೂ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳು ಪಂಜರದಲ್ಲಿರುವ ಗಿಳಿಗಳಿದ್ದಂತೆ. ಅವರು ಕೇವಲ ಪಠ್ಯಪುಸ್ತಕ ಜ್ಞಾನ ಪಡೆದಿರುತ್ತಾರೆ. ಸರಕಾರಿ ಶಾಲೆಗಳ ಮಕ್ಕಳು ಹದ್ದುಗಳಿದ್ದಂತೆ. ಅವರಲ್ಲಿ ಸಾಮಾನ್ಯ ಜ್ಞಾನ, ಕೌಶಲ್ಯ ಎಲ್ಲವೂ ಅಡಗಿರುತ್ತದೆ. ಆದರೆ, ಅದನ್ನು ಗುರುತಿಸಿ ಪ್ರೋತ್ಸಾಹ ನೀಡುವ ಮೂಲಕ ಬದುಕು ರೂಪಿಸುವ ದಾರಿ ತೋರಿಸುವ ಪ್ರಯತ್ನವನ್ನು ಪೋಷಕರು ಹಾಗೂ ಶಿಕ್ಷಕರು ಮಾಡುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದಿಂದ ಸರಕಾರಿ ಉದ್ಯೋಗಗಳು ಸಂಕುಚಿತಗೊಂಡಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಸಿಗುವುದು ತುಂಬಾ ಕಷ್ಟಕರವಾಗಿದೆ. ಅರ್ಹತೆ, ಸಾಮರ್ಥ್ಯ, ಕೌಶಲ್ಯದ ಮೇಲೆ ಉದ್ಯೋಗಗಳು ಲಭಿಸುತ್ತಿವೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳಿಗೆ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಜೀವನ ಮಹತ್ತರ ಘಟ್ಟವಾಗಿದೆ. ಈ ಹಂತದಲ್ಲಿ ಸಮರ್ಪಕವಾದ ಗುರಿ ಇಟ್ಟುಕೊಂಡು ಮುನ್ನಡೆಯಬೇಕು. ಐಎಎಸ್, ಕೆಎಎಸ್‍ನಂತಹ ಉನ್ನತ ಹುದ್ದೆಗಳ ಕಡೆಗೆ ಗಮನಹರಿಸಬೇಕು. ಅವಕಾಶ ಉಪಯೋಗಿಸಿಕೊಂಡು ಸ್ವಯಂಉದ್ಯೋಗಿಗಳಾಗಬೇಕು ಎಂದು ಮಹೇಶ್ ಸಲಹೆ ನೀಡಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಮಾಡಲಾಯಿತು. ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.80ರಷ್ಟು ಅಂಕಗಳಿಸಿದ ಎಲ್ಲಾ ವರ್ಗದ ಸುಮಾರು 150 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಶಾಸಕರಾದ ಎಂ.ಶ್ರೀನಿವಾಸ್, ಡಾ.ಕೆ.ಅನ್ನದಾನಿ, ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಡಾ.ಪ್ರೇಮ್‍ಕುಮಾರ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಚಂದ್ರಹಾಸ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೂರ್ಯಪ್ರಕಾಶ್‍ ಮೂರ್ತಿ, ಪುರುಷೋತ್ತಮ್, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News