ನಾನು ಸಾರಿಗೆ ಸಚಿವರಿಗೆ ಸಲಹೆ ನೀಡುವಷ್ಟು ಬೆಳೆದಿಲ್ಲ: ಮಾಜಿ ಸಚಿವ ಚಲುವರಾಯಸ್ವಾಮಿ

Update: 2018-09-15 17:56 GMT

ಮಂಡ್ಯ, ಸೆ.15: ಸಾರಿಗೆ ಬಸ್ ದರ ಏರಿಕೆ ವಿಚಾರದಲ್ಲಿ ಸಚಿವರಿಗೆ ಸಲಹೆ ನೀಡುವಷ್ಟು ನಾನು ಬೆಳೆದಿಲ್ಲ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.

ಮದ್ದೂರು ತಾಲೂಕು ಮಾಲಗಾರನಹಳ್ಳಿ ಗ್ರಾಮದಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಯುವ ರೈತ ರಾಜೇಶ್ ಅವರ ಮನೆಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜತೆ ಅವರು ಮಾತನಾಡಿದರು. ನನ್ನ ಪಕ್ಷದ ಮುಖಂಡರಿಗೆ ಸಾರಿಗೆ ಬಸ್ ದರ ಏರಿಕೆ ಮಾಡದಂತೆ ಸಲಹೆ ನೀಡಿದ್ದೆ ಹೊರತು ಈ ವಿಚಾರದಲ್ಲಿ ನಾನು ಸಚಿವರಿಗೆ ಸಲಹೆ ನೀಡುವಷ್ಟು ದೊಡ್ಡದಾಗಿ ಬೆಳೆದಿಲ್ಲ ಎಂದು ಅವರು ಸ್ಪಷ್ಟಪಡಿಸಿಸಿದರು.

ರೈತರ ಆತ್ಮಹತ್ಯೆ ವಿಚಾರದಲ್ಲೂ ಏನೇ ಹೇಳಿದರು ತಪ್ಪಾಗುತ್ತದೆ. ನಾನು  ಸೋತು ಹೋಗಿರುವುದರಿಂದ ಹೊಟ್ಟೆಕಿಚ್ಚಿಗೆ ಹೇಳುತ್ತಿದ್ದಾರೆ ಅಂದುಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಆತ್ಮಹತ್ಯೆಗಳು ಏಕೆ ಆಗುತ್ತಿವೆ? ಸರಕಾರದ ಸಾಲಮನ್ನಾ ಪರಿಣಾಮ ಬೀರಿದೆಯೆ? ಎಂಬುದರ ಬಗ್ಗೆ ಜನರೇ ಉತ್ತರ ನೀಡಲಿದ್ದಾರೆ ಎಂದು ಅವರು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಸಮ್ಮಿಶ್ರ ಸರಕಾರದ ಅಸ್ಥಿರತೆ ಬಗ್ಗೆ ಪ್ರತಿಕ್ರಿಯೆ ನೀಡುವಷ್ಟು ಶಕ್ತಿ ನನಗಿಲ್ಲ. ನನಗಿಂತಲೂ ದೊಡ್ಡವರು, ಬುದ್ದಿಜೀವಿಗಳಿದ್ದಾರೆ.  ಸರಕಾರ ಉಳಿಸಿಕೊಳ್ಳುವ ಸಶಕ್ತರಾಗಿದ್ದಾರೆ. ನಾನು ಹೇಳಿಕೆ ನೀಡುವುದು ತರವಲ್ಲ ಎಂದು ಅವರು ಜಾರಿಕೊಂಡರು. 

ಮೃತ ರೈತ ರಾಜೇಶ್ ಪತ್ನಿಗೆ ಸಾಂತ್ವನ ಹೇಳಿದ ಚಲುವರಾಯಸ್ವಾಮಿ ಅವರು, ವೈಯಕ್ತಿಕವಾಗಿ 20 ಸಾವಿರ ರೂ. ಧನಸಹಾಯ ಮಾಡಿದರು.
ಜಿಪಂ ಮಾಜಿ ಅಧ್ಯಕ್ಷ ಕಂಠಿ ಸುರೇಶ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು, ರಾಜಣ್ಣ, ಅಜ್ಜಹಳ್ಳಿ ರಾಮಕೃಷ್ಣ, ನವೀನ್, ಇತರ ಮುಖಂಡರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News