ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗದಿದ್ದರೆ ಸರಕಾರವೇ ಭರಿಸಲಿದೆ: ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಳಾ

Update: 2018-09-15 18:21 GMT

ಮಡಿಕೇರಿ, ಸೆ.15: ಕಾಲೇಜು ಶುಲ್ಕ ಅಥವಾ ಪರೀಕ್ಷಾ ಶುಲ್ಕ ಪಾವತಿಸಲು ತೊಂದರೆ ಇರುವ ವಿದ್ಯಾರ್ಥಿಗಳ ಪಟ್ಟಿ ನೀಡಿದಲ್ಲಿ ಸರ್ಕಾರದಿಂದಲೇ ಶುಲ್ಕ ಭರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾದ ಮಂಜುಳಾ ಭರವಸೆ ನೀಡಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಕಟ್ಟಡಗಳ ಸ್ಥಿತಿಗತಿ ಮತ್ತಿತರ ವಿಚಾರಗಳು ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಂಜುಳಾ ಮಾತನಾಡಿದರು. ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳ ಶುಲ್ಕ ಭರಿಸುವುದರೊಂದಿಗೆ ವಿದ್ಯಾರ್ಥಿ ನಿಲಯ ಪ್ರವೇಶಕ್ಕೂ ಅವಕಾಶ ಮಾಡಿಕೊಡಲಾಗುವುದು. ನಗರದ ಎರಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಶೀಘ್ರ ಆರಂಭಿಸಲಾಗುವುದೆಂದು ಅವರು ಹೇಳಿದರು.     

ಅತಿವೃಷ್ಟಿ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, ಕಚೇರಿ ಸಿಬ್ಬಂದಿಗಳು, ಎನ್ನೆಸ್ಸೆಸ್ ಅಧಿಕಾರಿಗಳು ಎಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಆಯುಕ್ತರು ವಿದ್ಯಾರ್ಥಿಗಳಿಗೆ ಯಾವುದೇ ರೀತಿ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.    

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾತನಾಡಿ, ಅತಿವೃಷ್ಟಿ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲಾ ಉಪನ್ಯಾಸಕರು, ಅಧಿಕಾರಿಗಳು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡು ಸಹಕರಿಸಿದ್ದಾರೆ ಎಂದು ಹೇಳಿದರು. ನಗರದ ಎರಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಜೊತೆಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಆಯುಕ್ತರ ಗಮನಕ್ಕೆ ತಂದರು. 

ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಪಾರ್ವತಿ ಅಪ್ಪಯ್ಯ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಜೆನ್ನಿಫರ್ ಲೋಲಿಟ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಚಿತ್ರಾ, ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಂಶುಪಾಲ ಉಷಾಲತಾ, ವಿರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲ ಸಿ.ಎಂ.ನಾಚಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಕೆ.ಸಿ.ದಯಾನಂದ, ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ತಮ್ಮ ಕಾಲೇಜಿನ ಕುಂದುಕೊರತೆ ಹಾಗೂ ಆಗಬೇಕಿರುವ ಕಾರ್ಯಗಳ ಬಗ್ಗೆ ಆಯುಕ್ತರ ಗಮನ ಸೆಳೆದರು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಮಹೇಶ್ ರಾವ್ ಮತ್ತಿತರರು ಹಾಜರಿದ್ದರು.   

ಸಭೆಗೂ ಮೊದಲು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾದ ಮಂಜುಳಾ ಅವರು ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಜೂನಿಯರ್ ಕಾಲೇಜು ಆವರಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News